ರಾಜಕೀಯ

ಕುಮಾರಸ್ವಾಮಿ ಸೂಚನೆಯಂತೆ ದೂರವಾಣಿ ಕದ್ದಾಲಿಕೆ: ನನ್ನ ಸ್ವಾತಂತ್ರ್ಯ ಹರಣವಾಗಿದೆ; ಎಚ್.ವಿಶ್ವನಾಥ್ 

Shilpa D

ಮೈಸೂರು: ರಾಜ್ಯದಲ್ಲಿನ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಪತ್ರಕರ್ತರು ಸೇರಿ 300ಕ್ಕೂ ಹೆಚ್ಚು ಜನರ ದೂರವಾಣಿ ಕದ್ದಾಲಿಕೆಯನ್ನು ಮುಖ್ಯಮಂತ್ರಿಯಾಗಿದ್ದ ಎಚ್.ಡಿ ಕುಮಾರಸ್ವಾಮಿ ಸರ್ಕಾರ ಮಾಡಿದೆ ಎಂದು ಅನರ್ಹ ಶಾಸಕ ಅಡಗೂರು ಎಚ್ ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರದೇ ಪಕ್ಷದ ರಾಜ್ಯಾಧ್ಯಕ್ಷನಾಗಿದ್ದ ನನ್ನ ಮತ್ತು ನನ್ನ ಪತ್ನಿಯ ಟೆಲಿಫೋನ್ ಕದ್ದಾಲಿಕೆ ಮಾಡಿ ನನ್ನ ಸ್ವಾತಂತ್ರ್ಯ ಹರಣ ಮಾಡಲಾಗಿದೆ. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ನಾವು 17 ಜನ ಶಾಸಕರ ಫೋನ್ ಗಳ ಜೊತೆ, ಕೆಲವು ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಪತ್ರಕರ್ತರ ಫೋನ್ ಕದ್ದಾಲಿಕೆ ಮಾಡಲಾಗಿದೆ. ಹಿಂದಿನ ಗುಪ್ತಚರ ಇಲಾಖೆಯನ್ನು ಕುಮಾರಸ್ವಾಮಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಅಧಿಕಾರಿಗಳ ಸಹಕಾರವಿಲ್ಲದೆ ಈ ಕೆಲಸ ನಡೆದಿಲ್ಲ, ಇದಕ್ಕೆ ಕಾರಣರಾಗಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾಮಾಡಬೇಕು ಎಂದು ಆಗ್ರಹಿಸಿದರು.

ಒಬ್ಬ ವ್ಯಕ್ತಿಯ ಚಾರಿತ್ರ್ಯಹರಣ ಮಾಡುವುದು ಅಪರಾಧ, ಮುಖ್ಯಮಂತ್ರಿಯಾಗಿದ್ದ ವೇಳೆ ಕುಮಾರಸ್ವಾಮಿ ಸ್ವತಃ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ವೆಂಕಟೇಶ್ ಅವರ ಫೋನನ್ನು ಕದ್ದಾಲಿಕೆ ಮಾಡಿದ್ದಾರೆ. ರಾಜ್ಯದ ಗೃಹ ಸಚಿವರಾಗಿದ್ದ ಎಂ.ಬಿ.ಪಾಟೀಲ್ ಅವರ ಫೋನ್ ನ್ನೂ ಕದ್ದಾಲಿಕೆ ಮಾಡಲಾಗಿದೆ ಎಂದು ಆರೋಪಿಸಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ನಾಗಿ ಶಾಸಕನಾಗಿದ್ದರೂ ನನ್ನ ಮೇಲೆ ಅವರಿಗೆ ನಂಬಿಕೆ ಇರಲಿಲ್ಲ. ನಾನು ನನ್ನ ಕುಟುಂಬದವರ ಜತೆ ಮಾತನಾಡುವುದನ್ನು ಕದ್ದಾಲಿಕೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ವಿಶ್ವನಾಥ್, ಬಂಡಾಯ ಶಾಸಕರ ಫೋನ್ ಟ್ಯಾಪ್ ಮಾಡಲಾಗಿತ್ತು. ಅದನ್ನು ಮುಂದಿಟ್ಟುಕೊಂಡು ನಮ್ಮನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿತ್ತು. ಇದನ್ನು ನೇರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿಸಿದ್ದರು.

ನಮ್ಮ ಖಾಸಗಿತನಕ್ಕೆ ಧಕ್ಕೆ ತರುವ ಕೆಲಸವಾಗಿದೆ. ಕಾನೂನಿನ ಪ್ರಕಾರ ನನ್ನ ಪತ್ನಿಯ ದೂರವಾಣಿ ಸಹ ಕದ್ದಾಲಿಕೆ ಮಾಡುವಂತಿಲ್ಲ. ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ‌ ಬಳಿಕ ನಮ್ಮನ್ನು ಬ್ಲಾಕ್ ಮೇಲ್ ಮಾಡಲು ಫೋನ್ ಟ್ಯಾಪಿಂಗ್ ಬಳಸಿಕೊಳ್ಳಲಾಗಿತ್ತು. ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.

SCROLL FOR NEXT