ರಾಜಕೀಯ

ಉಪಚುನಾವಣೆ: ಕಾರ್ಯಕರ್ತರ ಜಟಾಪಟಿಯಿಂದ ಬೇಸತ್ತ ಯಶವಂತಪುರ ಮತದಾರರು

Manjula VN

ಬೆಂಗಳೂರು: ರಾಜಕೀಯ ಪಕ್ಷಗಳ ಕಾರ್ಯಕರ್ತರ ಜಟಾಪಟಿಯಿಂದಾಗಿ ಯಶವಂತಪುರದಲ್ಲಿ ಮತದಾನದಲ್ಲಿ ನೀರಸ ಪ್ರತಿಕ್ರಿಯೆ ಕಂಡು ಬಂದಿತ್ತು. 

ಸಂಜೆ 6 ಗಂಟೆ ವೇಳೆಗೆ ಯಶವಂತಪುರ ಕ್ಷೇತ್ರದಲ್ಲಿ ಕೇವಲ ಶೇ.54ರಷ್ಟು ಮತದಾನ ಕಂಡು ಬಂದಿದೆ. ಮತದಾನ ಆರಂಭವಾಗುತ್ತಿದ್ದಂತೆಯೇ ಕಚೇರಿಗಳಿಗೆ ತೆರಳುವವರು ಪ್ರಮುಖವಾಗಿ ಮಹಿಳೆಯರು ಮತದಾನ ಚಲಾಯಿಸಲು ತರಾತುರಿಯಲ್ಲಿರುವುದು ಕಂಡಿ ಬಂದಿತ್ತು. ಮಧ್ಯಾಹ್ನದ ವೇಳೆಗೆ ಗೃಹಿಣಿಯರು ಹಾಗೂ ಹಿರಿಯರು ಬಂದು ತಮ್ಮ ಮತ ಹಕ್ಕು ಚಲಾಯಿಸುತ್ತಿರುವುದು ಸಾಮಾನ್ಯವಾಗಿ ಕಂಡು ಬಂದಿತ್ತು. 

ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಜಯ್ ಎಂಬುವವರು ಬೆಳ್ಳಂಬೆಳಿಗ್ಗೆಯೇ ತಮ್ಮ ಪತ್ನಿಯೊಂದಿಗೆ ಮತ ಚಲಾಯಿಸಿದರು. ಕಚೇರಿಗೆ ಹೋಗಬೇಕು. ಮತದಾನ ಮಾಡದೆ ನಾನು ಕಚೇರಿಗೆ ಹೋದರೆ, ನನ್ನ ಪತ್ನಿ ಮತವನ್ನೇ ಚಲಾಯಿಸುವುದಿಲ್ಲ. ಹೀಗಾಗಿ ಚಳಿಯಲ್ಲಿಯೂ ಇಬ್ಬರೂ ಬಂದು ಮತ ಚಲಾಯಿಸಿದ್ದೇವೆಂದು ಅಜಯ್ ಹೇಳಿದ್ದಾರೆ. 

ಇನ್ನು ಕೆಲ ಮತದಾರರು ಕಚೇರಿಗಳಲ್ಲಿ ಕಾಲಾವಕಾಶ ಕೇಳಿಕೊಂಡು ಬಂದು ತರಾತುರಿಯಲ್ಲಿ ಚಲಾಯಿಸುತ್ತಿರುವ ದೃಶ್ಯಗಳೂ ಕಂಡು ಬಂದಿತ್ತು. ಹೆಚ್ಆರ್ ಉದ್ಯೋಗಿಯಾಗಿರುವ ರಶ್ಮಿ ಎಂಬುವವರು, ಕ್ಯೂ ಚಿಕ್ಕದಾಗಿರುವುದರಿಂದ ಈಗಲೇ ಮತಹಕ್ಕು ಚಲಾಯಿಸಲು ಬಂದಿದ್ದೇನೆಂದು ತಿಳಿಸಿದ್ದಾರೆ. 

ಇನ್ನೂ ಕೆಲ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ಆದರೆ, ಕೆಲವೆಡೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ಏರ್ಪಟ್ಟ ಕಾರಣ ಬೂತ್ ಗಳಿಗೆ ಬಂದಿದ್ದ ಮತದಾರರು ಬೇಸರ ವ್ಯಕ್ತಪಡಿಸಿದರು. 

ಮತ್ತೊಂದೆಡೆ ಕೆಲ ಕಾರ್ಯಕರ್ತರು ನಕಲು ಇವಿಎಂ ತೆಗೆದುಕೊಂಡು ಬಂದು ಮತದಾರರಿಗೆ ತಮ್ಮ ಪಕ್ಷಕ್ಕೆ ಮತಹಾಕಲು ಯಾವ ಬಟನ್ ಪ್ರೆಸ್ ಮಾಡಬೇಕೆಂಬುದನ್ನು ತೋರಿಸುತ್ತಿದ್ದರು. ಇದರ ಪರಿಣಾಮ ಹಾರೋಹಳ್ಳಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಎದುರಾಗಿತ್ತು. ಬಳಿಕ ಸ್ಥಳಕ್ಕೆ ಬಂದಿದ್ದ ಪೊಲೀಸರು ಲಾಠಿಚಾರ್ಜ್ ನಡೆಸಿ, ಪರಿಸ್ತಿತಿಯನ್ನು ತಿಳಿಗೊಳಿಸಿದರು. 

ಇನ್ನು ಕೆಲವೆಡೆ ಜನರ ಮತಚೀಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದರಿಂದ, ಗೊಂದಲಕರ ವಾತಾವರಣ ನಿರ್ಮಾಣ ಗೊಂಡಿತ್ತು. ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದ್ದೆ. ಆದರೆ, ಉಪಚುನಾವಣೆಯಲ್ಲಿ ಪಟ್ಟಿಯಲ್ಲಿ ನನ್ನ ಹೆಸರನ್ನು ಅಳಿಸಿ ಹಾಕಲಾಗಿದೆ. ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಪರಿಶೀಲಿಸಿದ್ದೇನೆ. ಪಟ್ಟಿಯಲ್ಲಿ ನನ್ನ ಹೆಸರಿರುವುದು ಕಂಡು ಬಂದಿತ್ತು ಎಂದು ಮತದಾರರಾದ ಸುಲೋಚನಾ ಅವರು ಹೇಳಿದ್ದಾರೆ. 

SCROLL FOR NEXT