ರಾಜಕೀಯ

ಮಂಡ್ಯ: ಸುಮಲತಾ ಖ್ಯಾತಿಯ ಹೊರತಾಗಿಯೂ ನಿಖಿಲ್ ಸುಗಮ ಗೆಲುವಿಗೆ ಜೆಡಿಎಸ್ ರಣತಂತ್ರ!

Nagaraja AB

ಬೆಂಗಳೂರು:  ರೆಬೆಲ್ ಸ್ಟಾರ್ ಹಾಗೂ ರಾಜಕಾರಣಿ ದಿವಂಗತ ಅಂಬರೀಷ್ ಅವರ ಪತ್ನಿ ಸುಮಲತಾ ರಾಜಕೀಯ ಪ್ರವೇಶಿಸುವ ಕುರಿತು ಇನ್ನೂ ನಿರ್ಧಾರ ಪ್ರಕಟಿಸಿಲ್ಲ. ಆದರೆ, ರಾಜಕೀಯ ಪಕ್ಷಗಳು ಈಗಾಗಲೇ ಅವರನ್ನು ಸೆಳೆಯಲು ಪ್ರಯತ್ನಿಸುತ್ತಿವೆ. ಕಾಂಗ್ರೆಸ್  ನಂತರ ಈಗ ಬಿಜೆಪಿ ಕೂಡಾ ಪಕ್ಷಕ್ಕೆ ಸೇರ್ಪಡೆಯಾದರೆ ಸ್ವಾಗತಿಸುವುದಾಗಿ ಹೇಳುತ್ತಿದೆ.

ಈ ಮಧ್ಯೆ ಎರಡು ಪಕ್ಷಗಳು ಸುಮಲತಾ ಅವರ ಮುಂದಿನ ಹೆಜ್ಜೆ ಏನು ಎಂಬುದನ್ನು ಕುತೂಹಲದಿಂದ ಗಮನಿಸುತ್ತಿವೆ. ಸೀಟು ಹೊಂದಾಣಿಕೆ ಸಂದರ್ಭದಲ್ಲಿ  ಮಂಡ್ಯ ಜೆಡಿಎಸ್ ಪಕ್ಷಕ್ಕೆ ಬಂದರೆ ನಿಖಿಲ್ ಕುಮಾರಸ್ವಾಮಿ ಹಾದಿ ಸುಗಮವಾಗಲಿದೆ ಎಂಬುದು ಹೆಚ್ ಡಿ ದೇವೇಗೌಡರ ಚಿಂತನೆಯಾಗಿದೆ.

ಸುಮಲತಾ ಅವರ ಟ್ರಂಪ್ ಕಾರ್ಡ್ ಇಟ್ಟುಕೊಂಡು ಮಂಡ್ಯದಲ್ಲಿ ಸೀಟು ಹೊಂದಾಣಿಕೆ ಸಂಬಂಧ ಚೌಕಾಸಿ ಮಾಡುವ ಲೆಕ್ಕಾಚಾರದಲ್ಲಿದೆ ಕಾಂಗ್ರೆಸ್.  ಒಂದು ವೇಳೆ ಮಂಡ್ಯದಿಂದ ಸ್ಪರ್ಧಿಸಿದರೆ ಗೆಲುವು ಸಾಧಿಸುವುದಾಗಿ ಸುಮಲತಾ ಹೇಳಿದ್ದಾರೆ. ಬಿಜೆಪಿ ಅವರನ್ನು ಸಂಪರ್ಕಿಸಿಲ್ಲ, ಒಂದು ವೇಳೆ ಬಿಜೆಪಿಯಿಂದ ಸ್ಪರ್ಧಿಸುವುದಾದರೆ ಸ್ವಾಗತಿಸುವುದಾಗಿ ಬಿಜೆಪಿ ಮುಖಂಡ ಆರ್. ಅಶೋಕ್ ಹೇಳಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಆರ್ . ಅಶೋಕ್ ಈ ಹೇಳಿಕೆ ನಂತರ ಮಂಡ್ಯದಿಂದಲೇ ರಾಜಕೀಯ ಪ್ರವೇಶಿಸುವುದಾಗಿ ಸುಮಲತಾ ಅವರು ಘೋಷಿಸಿದ್ದಾರೆ. ಮಂಡ್ಯದಿಂದಲೇ  ಸ್ಪರ್ಧಿಸುವಂತೆ ಕಾಂಗ್ರೆಸ್ ಕೂಡಾ  ಒತ್ತಡ ಹಾಕುತ್ತಿದೆ. ಜೆಡಿಎಸ್ ಗೆ ಆಡಳಿತ ವಿರೋಧಿ ಅಲೆ ಇದ್ದು, ಸುಮಲತಾ ಸ್ಪರ್ಧಿಸಿದ್ದರೆ ಖಂಡಿತಾ ಗೆಲ್ಲುತ್ತಾರೆ ಎಂಬ ವಿಶ್ವಾಸ ಕಾಂಗ್ರೆಸ್ ಕಾರ್ಯಕರ್ತರಲ್ಲಿದೆ.

ಕಾಂಗ್ರೆಸ್  ಮತ್ತು ಪ್ರತಿಪಕ್ಷ ಬಿಜೆಪಿಯಂತೆ ಜೆಡಿಎಸ್ ಕೂಡಾ ಸುಮಲತಾ  ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ, ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ರಾಜಕೀಯ ಪ್ರವೇಶಕ್ಕೆ ಇದು ಸೂಕ್ತ ಸಂದರ್ಭ ಎನ್ನುವ ಮಾತುಗಳು ತೆನೆ ಪಾಳಯದಲ್ಲಿ ಕೇಳಿಬರುತ್ತಿವೆ.

ನಿಖಿಲ್ ಕುಮಾರಸ್ವಾಮಿ ತಂದೆ ಮುಖ್ಯಮಂತ್ರಿಯಾಗಿರುವುದರಿಂದ ನಿಖಿಲ್ ಕುಮಾರಸ್ವಾಮಿ ಸಕ್ರಿಯ ರಾಜಕೀಯಕ್ಕೆ ಇದು ಉತ್ತಮ ಸಮಯವಾಗಿತ್ತು ಎಂದು ಜೆಡಿಎಸ್ ನಾಯಕರು ಹೇಳುತ್ತಾರೆ.  ಒಟ್ಟಾರೇ, ಮಂಡ್ಯ ಲೋಕಸಭಾ ಕ್ಷೇತ್ರ ಕುತೂಹಲ ಮೂಡಿಸುತ್ತಿದ್ದು, ಎಲ್ಲರ  ಚಿತ್ತ ಸುಮಲತಾರತ್ತ ನೆಟ್ಟಿದೆ.
SCROLL FOR NEXT