ರಾಜಕೀಯ

ವಿರೋಧಿಗಳ ಸಾವು ಬಯಸುವ ದುರ್ಬುದ್ಧಿ ಬಿಜೆಪಿ ರಕ್ತದಲ್ಲೇ ಇದೆ: ಸಿದ್ದರಾಮಯ್ಯ

Lingaraj Badiger
ಬೆಂಗಳೂರು: ವಿರೋಧಿಗಳ ಸಾವು ಬಯಸುವಷ್ಟು ರಾಜಕಾರಣಿಗಳು ಅಧೋಗತಿಗೆ ಇಳಿಯಬಾರದು. ಈ ದುರ್ಬುದ್ಧಿ ಬಿಜೆಪಿಯ ರಕ್ತದಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಆಪರೇಷನ್ ಕಮಲ ಆಡಿಯೋ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಪರೇಷನ್​ ಕಮಲಕ್ಕೆ ಸಂಬಂಧಿಸಿದ ಎರಡನೇ ಆಡಿಯೋವೊಂದು ಇಂದು ಮಾಧ್ಯಮಗಳಿಗೆ ಬಿಡುಗಡೆಯಾಗಿದ್ದು, ಆ ಆಡಿಯೋದಲ್ಲಿ ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ ಅವರು, “ದೇವೇಗೌಡರ ವಿಕೆಟ್​ ಬೇಗ ಬಿದ್ದು ಹೋಗುತ್ತದೆ. ಕುಮಾರಸ್ವಾಮಿಗೂ ಆರೋಗ್ಯ ಸರಿ ಇಲ್ಲ. ನೀನು ಮುಂದೆ ಏಕಾಂಗಿಯಾಗುವೆ,” ಎಂದು ಜೆಡಿಎಸ್ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಅವರಿಗೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ. 
ಆಡಿಯೋ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಟ್ವಿಟ್ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ರಾಜಕಾರಣಿಗಳು ತಮ್ಮ ವಿರೋಧಿಗಳ ಸಾವು ಬಯಸುವ ಹಂತಕ್ಕೆ ಇಳಿಯಬಾರದು. ದೇವೇಗೌಡರ ವಿಚಾರದಲ್ಲಿ ಹಗುರವಾಗಿ ಮಾತನಾಡುವುದು ಖಂಡನೀಯ ಎಂದಿದ್ದಾರೆ.
ವಿರೋಧಿಗಳ ಸಾವು ಬಯಸುವಷ್ಟು ರಾಜಕಾರಣಿಗಳು ಅಧೋಗತಿಗೆ ಇಳಿಯಬಾರದು.‌ ಈ ದುರ್ಬುದ್ಧಿ ಬಿಜೆಪಿ ರಕ್ತದಲ್ಲಿದೆ. ಹಿಂದೆ ಜನಾರ್ದನ ರೆಡ್ಡಿ ನನ್ನ ಕುಟುಂಬದ ಬಗ್ಗೆ ಹೇಳಿದ್ದ ಮಾತನ್ನೇ ಈಗ ಬಿಜೆಪಿ ನಾಯಕರು ದೇವೇಗೌಡ ಕುಟುಂಬದ ಬಗ್ಗೆ ಹೇಳಿದ್ದಾರೆ. ಖಂಡನೀಯ ನಡವಳಿಕೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮತ್ತೊಂದು ಟ್ವಿಟ್ ನಲ್ಲಿ ಆಪರೇಷನ್ ಕಮಲದ ಆಡಿಯೋ ಸಂಭಾಷಣೆ ಆಘಾತಕಾರಿಯಾಗಿದೆ. ಇಡೀ ದೇಶದ ಮುಂದೆ ಸ್ವಚ್ಚ ರಾಜ್ಯ ಬಿಜೆಪಿ ಸಜ್ಜನರು, ಸಂಘ ಪರಿವಾರದ ಸಂಸ್ಕೃತಿ ರಕ್ಷಕರು ಯಾವ ಬಿಲದಲ್ಲಿ ಅಡಗಿದ್ದಾರೆ? ಎಂದು ಮಾಜಿ ಸಿಎಂ ಟೀಕಿಸಿದ್ದಾರೆ.
SCROLL FOR NEXT