ಹಾಸನ: ರಾಜ್ಯ ಸಮ್ಮಿಶ್ರ ಸರ್ಕಾರ ಗೂಂಡಾ ಸರ್ಕಾರವಾಗಿದೆ, ರಾಜ್ಯದಲ್ಲಿ ಶಾಸಕರಿಗೆ ರಕ್ಷಣೆ ಇಲ್ಲ ಎಂದ ಮೇಲೆ ಸಾಮಾನ್ಯ ಜನರ ಪಾಡೇನು ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರು ದಾಳಿ ನಡೆಸಿ, ಓರ್ವ ಗಾಯಗೊಂಡ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಅವರು ಶಾಸಕರಿಗೆ ಭದ್ರತೆ ಕೊಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಹಾಸನದಲ್ಲಿ ಶಾಂತಿ ಕಾಪಾಡಿಕೊಳ್ಳಲು ಸಿಎಂ ವಿಫಲರಾಗಿರುವುದರಿಂದ ಅವರಿಗೆ ನೈತಿಕ ಹಕ್ಕು ಇಲ್ಲ, ಹಾಸನದಲ್ಲಿ ಯಾವುದೇ ಸವಾಲು ಎದುರಿಸಲು ಬಿಜೆಪಿ ನಾಯಕರು ಸಿದ್ಧರಿದ್ದಾರೆ, ಹಾಸನ ಸಿಎಂ ತವರು ಜಿಲ್ಲೆಯಾಗಿರಬಹುದು, ಆದರೆ ಜೆಡಿಎಸ್ ಕೇವಲ 37 ಶಾಸಕರನ್ನು ಹೊಂದಿದೆ, ನಮ್ಮ ಬಳಿ 104 ಶಾಸಕರಿದ್ದಾರೆ ಎಂದು ಹೇಳಿದ್ದಾರೆ.
ಪ್ರೀತಂ ಅವರ ಮೇಲೆ ಹಲ್ಲೆ ನಡೆಸಲು ಜೆಡಿಎಸ್ ನಾಯಕರು ಸಂಚು ಮಾಡಿದ್ದಾರೆ, ಗುರುವಾರ ರಾಜ್ಯಪಾಲರನ್ನು ಭೇಟಿ ಮಾಡಿ ಪ್ರಕರಣದ ಬಗ್ಗೆ ವಿವರಣೆ ನೀಡುವುದಾಗಿ ತಿಳಿಸಿದ್ದಾರೆ. ಜಿಲ್ಲಾ ಪೊಲೀಸರು ಆರೋಪಿಗಳ ವಿರುದ್ದ ಪ್ರಕರಣವನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ,
ಸದನದಲ್ಲಿ ಈ ವಿಷಯವನ್ನು ಚರ್ಚಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸುವುದಾಗಿ ತಿಳಿಸಿದ ಯಡಿಯೂರಪ್ಪ, ಸರ್ಕಾರದ ಗೂಂಡಾಗಿರಿ ವಿರೋಧಿಸಿ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.