ರಾಜಕೀಯ

ಕಾಂಗ್ರೆಸ್ ಪಕ್ಷ ಯಾವಾಗಲೂ ದಲಿತರ ಹಿತ ಕಾಪಾಡಿದೆ: ಡಿ.ಕೆ.ಶಿವಕುಮಾರ್

Nagaraja AB

ಬೆಂಗಳೂರು: ಕಾಂಗ್ರೆಸ್  ಪಕ್ಷ ಯಾವಾಗಲೂ ದಲಿತರ ಹಿತ ಕಾಪಾಡಿದೆ. ಲಂಬಾಣಿ ಸೇರಿದಂತೆ ಎಲ್ಲಾ ದಲಿತ ನಾಯಕರನ್ನು ಕಾಂಗ್ರೆಸ್ ಬೆಳೆಸಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮುಖ್ಯಮಂತ್ರಿಯಾಗುವುದನ್ನು ಮೂರು ಬಾರಿ ತಪ್ಪಿಸಲಾಯಿತು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಿನ್ನೆ ನೀಡಿದ ಹೇಳಿಕೆಯ ಬೆನ್ನಲ್ಲೇ ಶಿವಕುಮಾರ್ ಈ ಸ್ಪಷ್ಟನೆ ನೀಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೃಷ್ಣಬೈರೇಗೌಡ ತಮ್ಮ ನಿವಾಸದಲ್ಲಿಂದು ಏರ್ಪಡಿಸಿದ್ದ ಉಪಹಾರ ಕೂಟದಲ್ಲಿ ಪಾಲ್ಗೊಂಡ ಬಳಿಕ ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್,  ಇಡೀ ದೇಶದಲ್ಲಿ ಎಸ್.ಸಿ, ಎಸ್.ಟಿ. ಸಮುದಾಯದ ಹಿತ ಕಾಪಾಡುವ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪ ಯೋಜನೆ ಕಾಯ್ದೆಯನ್ನು ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಬಹುಮತ ಸಿಗದ ಕಾರಣ ಮೈತ್ರಿ ಮಾಡಿಕೊಂಡಿದ್ದೇವೆ. ಹೀಗಾಗಿ ಪರಮೇಶ್ವರ್ ಉಪ ಮುಖ್ಯಮಂತ್ರಿ ಆಗಿದ್ದಾರೆ. ನಾವೆಲ್ಲ ಅವರ ಕೆಳಗೆ ಕೆಲಸ ಮಾಡ್ತಿದ್ದೇವೆ. ಎಸ್ಸಿ ಸಮುದಾಯದ ಎಲ್ಲ ವರ್ಗಕ್ಕೆ ಸಚಿವರನ್ನು ಮಾಡಿದ್ದೇವೆ. ಎಸ್ಟಿ, ಬೋವಿ, ಎಡಗೈ, ಲಂಬಾಣಿ ಸಮುದಾಯಕ್ಕೆ ಅವಕಾಶ ಕಲ್ಪಿಸಿದ್ದೇವೆ ಎಲ್ಲಾ ವರ್ಗದ ಹಿತ ಕಾಯುವ ಪಕ್ಷ ಕಾಂಗ್ರೆಸ್ ಮಾತ್ರ ಎಂದರು.

ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಮಂಡ್ಯದಲ್ಲಿ ಈಗಾಗಲೇ ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದಾರೆ. ಹಾಗಾಗಿ ಅಲ್ಲಿ ಜೆಡಿಎಸ್ ಸ್ಪರ್ಧೆ ಮಾಡುತ್ತದೆ. ಸುಮಲತಾ ಅಂಬರೀಶ್ ಅವರು ರಾಜಕೀಯಕ್ಕೆ ಬರುವುದಾದರೆ ಸಾಕಷ್ಟು ಅವಕಾಶಗಳಿವೆ, ಅವರು ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಡ ಹಾಕಿರಬಹುದು, ಅವರ ಜೊತೆ ನಮ್ಮ ನಾಯಕರು ಮಾತುಕತೆ ನಡೆಸುತ್ತಾರೆ. ಸುಮಲತಾ ಅವರಿಗೆ ನಾವು ಮನವರಿಕೆ ಮಾಡಿಕೊಡುತ್ತೇವೆ ಎಂದು ಶಿವಕುಮಾರ್ ಹೇಳಿದರು.

ಏರ್ ಶೋನಲ್ಲಿ ಅಗ್ನಿ ಅವಘಡ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್.ಯಡಿಯೂರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಯಡಿಯೂರಪ್ಪ ಅವರಿಗೆ ಬುದ್ಧಿ ಭ್ರಮಣೆ ಆಗಿರಬಹುದು ಎಂದು ತಿರುಗೇಟು ನೀಡಿದರು

SCROLL FOR NEXT