ಜೆಡಿಎಸ್ ನಲ್ಲೂ ಭುಗಿಲೆದ್ದಿದೆಯಾ ಭಿನ್ನಮತ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್ ವಿಶ್ವನಾಥ್ ರಾಜೀನಾಮೆ?
ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆ ವಹಿಸಿಕೊಂಡ ಕೇವಲ ಐದೇ ತಿಂಗಳಲ್ಲಿ ಹೆಚ್ ವಿಶ್ವನಾಥ್ ಆ ಸ್ಥಾನಕ್ಕೆ ...
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆ ವಹಿಸಿಕೊಂಡ ಕೇವಲ ಐದೇ ತಿಂಗಳಲ್ಲಿ ಹೆಚ್ ವಿಶ್ವನಾಥ್ ಆ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ.. ಮೈತ್ರಿ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯ ನಂತರ ಉಂಟಾದ ರಾಜಕೀಯ ಬೆಳವಣಿಗೆಗಳು ಕೇವಲ ಕಾಂಗ್ರೆಸ್ ಪಕ್ಷವನ್ನು ಅಸ್ಥಿರಗೊಳಿಸಿದ್ದು ಮಾತ್ರವಲ್ಲದೆ, ಜೆಡಿಎಸ್ ನಲ್ಲಿ ಕೂಡ ಭಿನ್ನಮತದ ಹೊಗೆಯಾಡುತ್ತಿದೆ ಎಂಬುದು ಗೊತ್ತಾಗುತ್ತಿದೆ. ಇದರ ಪರಿಣಾಮವೇ ವಿಶ್ವನಾಥ್ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯಲಾಗದೆ ಹುದ್ದೆ ತೊರೆಯುತ್ತಿರುವುದು ಎನ್ನಲಾಗಿದೆ.
ಜೆಡಿಎಸ್ ಪಾಲಿಗೆ ಖಾಲಿ ಇದ್ದ ಎರಡು ಸಚಿವ ಸ್ಥಾನಗಳ ಹುದ್ದೆ ಭರ್ತಿ ಮತ್ತು ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ವಿಚಾರದಲ್ಲಿ ಪಕ್ಷದ ನಾಯಕರಲ್ಲಿ ತೀವ್ರ ಅತೃಪ್ತಿ ಉಂಟಾಗಿದ್ದು ಇದರಿಂದ ಜೆಡಿಎಸ್ ನಲ್ಲಿ ಭಿನ್ನಮತ ಉಂಟಾಯಿತು.
ಕಳೆದ ವರ್ಷ ನವೆಂಬರ್ ನಲ್ಲಿ ನಡೆದ ಉಪ ಚುನಾವಣೆ ನಂತರ ಭಿನ್ನಮತ ಆರಂಭಗೊಂಡು ಇತ್ತೀಚೆಗೆ ಅದು ಭುಗಿಲೆದ್ದಿತ್ತು. ಇದು ಜೆಡಿಎಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ.
ನನಗೆ ಇತ್ತೀಚೆಗೆ ಆರೋಗ್ಯ ಸರಿಯಿಲ್ಲ, ಹಲವು ಸರ್ಜರಿಗೊಳಗಾಗಿದ್ದೇನೆ, ರಾಜ್ಯಾದ್ಯಂತ ಪ್ರವಾಸ ಮಾಡುವುದು, ಪಕ್ಷ ಸಂಘಟಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ವಿಶ್ವನಾಥ್ ನಿನ್ನೆ ಸುದ್ದಿಗಾರರಿಗೆ ತಿಳಿಸಿದರು. ಆದರೆ ಒತ್ತಡ, ತಳಮಳದಿಂದ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳುತ್ತವೆ.
ಜೆಡಿಎಸ್ ನಲ್ಲಿ ದೇವೇಗೌಡರು ಹೇಳಿದ್ದೇ ಅಂತಿಮ. ಪಕ್ಷದಲ್ಲಿ ಅವರು ಒಂಥರಾ ಒನ್ ಮ್ಯಾನ್ ಆರ್ಮಿ ಇದ್ದಂತೆ. ಉಳಿದವರೆಲ್ಲರೂ ನಾಮಕಾವಸ್ಥೆ. ಇವೆಲ್ಲವನ್ನು ನೋಡಿಕೊಂಡು ಬಂದ ವಿಶ್ವನಾಥ್ ಅವರಿಗೆ ಸಾಕಾಗಿರಬೇಕು. ಅದಕ್ಕೆ ರಾಜೀನಾಮೆ ಕೊಡುತ್ತಿದ್ದಾರೆ ಎನ್ನುತ್ತವೆ ಪಕ್ಷದ ಆಂತರಿಕ ಮೂಲಗಳು.
ಪಕ್ಷದಲ್ಲಿ ನಿರ್ಧಾರ ಕೈಗೊಳ್ಳುವಾಗ ತಮ್ಮನ್ನು ಕೇಳದಿರುವುದು ವಿಶ್ವನಾಥ್ ಅವರಿಗೆ ಬೇಸರ ತಂದಿರಬೇಕು. ಕಾಂಗ್ರೆಸ್ ನಿಂದ ಬಂದ ವಿಶ್ವನಾಥ್ ಅವರನ್ನು ಇನ್ನೂ ಕೂಡ ಪಕ್ಷದಲ್ಲಿ ಕೆಲವರು ಹೊರಗಿನವರೆಂದೇ ಪರಿಗಣಿಸುತ್ತಿದ್ದು ಅವರ ನಾಯಕತ್ವವನ್ನು ಒಪ್ಪುತ್ತಿಲ್ಲ.
ಆದರೆ ತಮ್ಮನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ದೇವೇಗೌಡರಿಗೆ ಕೃತಜ್ಞನಾಗಿದ್ದು, ಪಕ್ಷದೊಳಗೆ ಯಾವುದೇ ಭಿನ್ನಮತವಿಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ.
ಇನ್ನೊಂದೆಡೆ ದೆಹಲಿಯಲ್ಲಿ ನಿನ್ನೆ ಪ್ರತಿಕ್ರಿಯೆ ನೀಡಿದ ಹೆಚ್ ಡಿ ದೇವೇಗೌಡ, ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದಿದ್ದಾರೆ. ನಾಳೆ ಜೆಡಿಎಸ್ ಸಭೆ ನಡೆಯಲ್ಲಿದ್ದು ಅಲ್ಲಿ ಎಲ್ಲಾ ನಾಯಕರು ಹಾಜರಿರುತ್ತಾರೆ. ವಿಶ್ವನಾಥ್ ರಾಜೀನಾಮೆ ಕೇವಲ ವದಂತಿಯಷ್ಟೇ ಎನ್ನುತ್ತಾರೆ.