ರಾಜಕೀಯ

ಸ್ವಪಕ್ಷೀಯರಿಂದಲೇ 'ಸಿದ್ದು' ಗೆ ಗುದ್ದು: ಸಿಎಂ ಬೆನ್ನಿಗೆ ನಿಂತ ಪರಮೇಶ್ವರ್

Shilpa D
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಭಾಷಾ ಮಾಧ್ಯಮ ವಿಷಯವಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಿಲುವಿಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ತಮ್ಮದೇ ಪಕ್ಷದ ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.
ಅತಿ ಹೆಚ್ಚು ವಿದ್ಯಾರ್ಥಿಗಳಿರುವ ಒಂದು ಸಾವಿರ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಇಂಗ್ಲಿಷ್ ಭಾಷಾ ಮಾಧ್ಯಮಗಳನ್ನು ಬೋಧಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿರ್ಧರಿಸಿದ್ದು, ಬಜೆಟ್‍ನಲ್ಲಿ ಘೋಷಣೆ ಮಾಡಿದ್ದಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಪಾಠ ಪ್ರವಚನ ಕೂಡ ನಡೆಯಬೇಕು. ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಮುಖ್ಯವಾಗಬೇಕು. ಇಂಗ್ಲಿಷ್ ಮಾಧ್ಯಮ ಅಗತ್ಯ ಇಲ್ಲ ಎಂಬರ್ಥದಲ್ಲಿ ಟ್ವೀಟ್ ಮಾಡಿ ವಿರೋಧ ವ್ಯಕ್ತಪಡಿಸಿದ್ದರು.
ಆದರೆ ಇದಕ್ಕೆ ವಿರೋಧ ವ್ಯಕ್ತ ಪಡಿಸಿರುವ ಡಿಸಿಎಂ ಪರಮೇಶ್ವರ್ ತಾವು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಿಲುವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರದ ನಿರ್ಧಾರಕ್ಕೆ ನನ್ನ ಸಹಮತವಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಾದರೆ ಇಂಗ್ಲಿಷ್ ಅನಿವಾರ್ಯವಾಗಿದೆ. ಹೀಗಾಗಿ ಇಂಗ್ಲಿಷ್ ಕಲಿಕೆಗೆ ನನ್ನ ಬೆಂಬಲವಿದೆ. ನಾವು ಇಂಗ್ಲಿಷ್ ಕಲಿಸಿದಾಕ್ಷಣ ಕನ್ನಡವನ್ನು ತೆಗೆದು ಹಾಕುತ್ತೇವೆ ಎಂದರ್ಥವಲ್ಲ. ಇಂಗ್ಲಿಷ್ ಜತೆಗೆ ಕನ್ನಡವನ್ನೂ ಹೆಚ್ಚುವರಿಯಾಗಿ ಕಲಿಸುತ್ತೇವೆ ಎಂದು ಹೇಳಿದ್ದಾರೆ.
 ರಾಷ್ಟ್ರ ಮಟ್ಟದಲ್ಲಿ ತ್ರಿಭಾಷಾ ಸೂತ್ರವಿದ್ದು, ಇಂಗ್ಲಿಷ್, ಹಿಂದಿ, ಕನ್ನಡ ಮೂರು ಭಾಷೆಗಳಿಗೂ ಆದ್ಯತೆ ಇದೆ. ಸ್ಥಳೀಯ ಭಾಷೆ ನಮ್ಮ ಕನ್ನಡಕ್ಕೂ ಆದ್ಯತೆ ಇದ್ದು, ಇಂಗ್ಲಿಷ್ ಭಾಷೆ ಕಲಿಸುವುದು ಅನಿವಾರ್ಯ ಎಂದು ಹೇಳಿದರು.
SCROLL FOR NEXT