ರಾಜಕೀಯ

ಶಾಸಕಾಂಗ ಸಭೆಗೆ ಹಾಜರಾಗಿ ಇಲ್ಲವೆ ಕ್ರಮ ಎದುರಿಸಿ: 'ಕೈ' ಶಾಸಕರಿಗೆ ಸಿದ್ದರಾಮಯ್ಯ ಎಚ್ಚರಿಕೆ

Lingaraj Badiger
ಬೆಂಗಳೂರು: ಕಾಂಗ್ರೆಸ್ ನಾಯಕರು ಆಪರೇಷನ್ ಕಮಲ ವಿಫಲವಾಗಿದೆ ಎಂದು ಹೇಳುತ್ತಿದ್ದರೂ ದೋಸ್ತಿ ಸರ್ಕಾರ ಉರುಳಿಸುವ ಬಿಜೆಪಿ ಯತ್ನ ಮುಂದುವರೆದಿದೆ ಎನ್ನಲಾಗಿದೆ. 
ಈ ಮಧ್ಯೆ, ಕಾಂಗ್ರೆಸ್ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು,
ಕಡ್ಡಾಯವಾಗಿ ಹಾಜರಾಗಬೇಕು, ಹಾಜರಾಗದಿದ್ದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ನ ಎಲ್ಲಾ ಶಾಸಕರಿಗೂ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿನ ಇತ್ತೀಚಿನ ರಾಜಕೀಯ ಸನ್ನಿವೇಶಗಳ ಹಿನ್ನೆಲೆಯಲ್ಲಿ ನಾಳೆ ಮಧ್ಯಾಹ್ನ 3.30ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವಿಶೇಷ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಈ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದ್ದಾರೆ. ಅಲ್ಲದೆ ಶಾಸಕರ ಅನುಪಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನುಚ್ಛೇದ 10ರ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಅತೃಪ್ತರು ರಾಜೀನಾಮೆ ನೀಡುವುದಾದರೆ ಸ್ಪೀಕರ್ ಗೆ ನೀಡಬೇಕು. ಒಂದೆರಡು ದಿನ ಅವರಿಗೆ ಸ್ಪೀಕರ್ ಲಭ್ಯವಾಗದಿದ್ದರೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿಲ್ಲ ಎಂಬ ಹಿನ್ನೆಲೆಯಲ್ಲಿ ಅವರನ್ನು ಅನರ್ಹಗೊಳಿಸಬಹುದಾಗಿದೆ. ಅನರ್ಹಗೊಂಡರೆ ಅವರು ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ 10 ವರ್ಷಗಳ ಕಾಲ ಸ್ಪರ್ಧಿಸುವಂತಿಲ್ಲ.
ಈ ಎಲ್ಲಾ ರಾಜಕೀಯ ಲೆಕ್ಕಾಚಾರ ಹಾಕಿ ಕಾನೂನು ಅಂಶಗಳನ್ನು ಗಮನಿಸಿ ಶಾಸಕಾಂಗ ಪಕ್ಷದ ಸಭೆ ಕರೆದು ಶಾಸಕರಿಗೆ ನೋಟೀಸ್ ನೀಡಲಾಗಿದೆ.
ಅತೃಪ್ತರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ, ಪಕ್ಷ ಯಾವ ಕ್ರಮ ಕೈಗೊಳ್ಳುತ್ತದೆ, ರಾಜಕೀಯ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
SCROLL FOR NEXT