ಬೆಂಗಳೂರು: ಒಂದು ವೇಳೆ ಜೆಡಿಎಸ್ ಗೆ ಸರಳ ಬಹುಮತ ಸಿಕ್ಕಿದ್ದರೇ ನನ್ನ ಕಾರ್ಯ ವೈಖರಿಯೇ ಬೇರೆ ಇರುತ್ತಿತ್ತು, ನಾನು ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ 2ನೇ ಬಾರಿಗೆ ನಾನು ಮುಖ್ಯಮಂತ್ರಿಯಾಗಿರುವುದು ದುರಾದೃಷ್ಟ ಎಂದು ಇತ್ತಿಚೆಗೆ ಸಿಎಂ ಬೇಸರ ವ್ಯಕ್ತ ಪಡಿಸಿದ್ದರು.
ಲಾಲ್ ಬಾಗ್ ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿರುವಾಗ ನಮ್ಮ ದೂರದೃಷ್ಟಿಯಂತೆ, ನಮ್ಮ ನಿರ್ಧಾರದಂತೆ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಗೊಳಿಸುವುದು ಕಷ್ಟವಾಗುತ್ತದೆ, ಇದು ನನಗೂ ಕೂಡ ಅನುಭವವಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ಶಾಸಕರು ರಜೆಯ ಮೇಲೆ ವಿಶ್ರಾಂತಿಗೆ ತೆರಳಿದ್ದಾರೆ, ಅಲ್ಲಿಂದ ಬಂದ ನಂತರ ಅವರೆಲ್ಲಾ ಕೆಲ ಸಮಯ ತಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನು ಕೇಳಲಿ ಎಂದು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರ ಸ್ಥಿರವಾಗಿದ್ದು, ಉತ್ತಮವಾಗಿ ನಡೆಯುತ್ತಿದೆ, ಆಪರೇಷನ್ ಕಮಲ ನಮ್ಮ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ ಎಂದು ಹೇಳಿರುವ ಕುಮಾರಸ್ವಾಮಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪುರಸ್ಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.