ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ಎದುರಿಸಲು ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ, ಇರುವ 28 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು ಎಂಬ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಿದೆ.
ಸೀಟು ಹಂಚಿಕೆ ಸಂಬಂಧ ಈಗಾಗಲೇ ಪ್ರಾಥಮಿಕ ಹಂತದ ಚರ್ಚೆ ಮುಗಿದಿದೆ, ಮುಂದಿನ ಮೂರು ನಾಲ್ಕು ದಿನಗಳಲ್ಲಿ ಮತ್ತೆ ಸಭೆ ಸೇರಿ ಕ್ಷೇತ್ರ ಹಾಗೂ ಸಂಖ್ಯೆಯನ್ನು ನಿರ್ಧರಿಸಲಿದ್ದೇವೆ, ದೇವೇಗೌಡರ ಸಮ್ಮುಖದಲ್ಲಿ ಸೀಟು ಹಂಚಿಕೆ ಸಂಖ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಹಿಂದೆ ದೇವೇಗೌಡ ಮತ್ತು ಸಿಎಂ ಕುಮಾರ ಸ್ವಾಮಿ ತಮ್ಮ ಪಕ್ಷ 10-12 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂಬ ಸುಳಿವು ನೀಡಿದ್ದರು, ಇದಕ್ಕಾಗಿ ಮತ್ತೆ ಹಲವು ಸುತ್ತಿನ ಮಾತುಕತೆಗಳು ನಡೆಯಬೇಕಿದೆ, ನಾವು ಯಾವುದೇ ಬೇಡಿಕೆ ಇಟ್ಟಿಲ್ಲ, ಎರಡು ಪಕ್ಷಗಳುಪ್ರಮುಖ ಅಜೆಂಡಾ ಹೆಚ್ಚಿನ ಸಂಖ್ಯೆಯ ಸೀಟುಗಳನ್ನು ಗೆಲ್ಲುವುದಾಗಿದೆ, ಹಾಗೂ ಬಿಜೆಪಿಯನ್ನು ಖಾತೆ ತೆರೆಯದಂತೆ ಮಾಡುವುದೇ ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಹೇಳಿದ್ದಾರೆ.
ಕುಮಾರಕೃಪಾ ಅತಿಥಿಗೃಹದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ರಾಜ್ಯದಲ್ಲಿನ ಬರ ಪರಿಸ್ಥಿತಿ ನಿರ್ವಹಣೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಈಗಾಗಲೇ ಸರ್ಕಾರ ಬರ ಪರಿಸ್ಥಿತಿ ನಿರ್ವಹಣೆಗೆ 4 ವಿಭಾಗಗಳಿಗೆ 4 ಸಚಿವರ ಪ್ರತ್ಯೇಕ ತಂಡ ರಚನೆ ಮಾಡಿದ್ದು, ಆ ಸಚಿವರುಗಳು ಪ್ರತಿ ಜಿಲ್ಲೆಗೂ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ, ಅಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ನಾವು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡಿದ್ದೇವೆ. ಅದೇ ರೀತಿ ಜಾನುವಾರುಗಳಿಗೆ ಮೇವು, ಉದ್ಯೋಗ ಸೃಷ್ಟಿ ಸಂಬಂಧ ಚರ್ಚಿಸಲಾಗಿದ್ದು ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos