ರಾಜಕೀಯ

80 ಕೋಟಿ ಹಣಕ್ಕಾಗಿ ರಮೇಶ್ ಜಾರಕಿಹೊಳಿ ರಾಜೀನಾಮೆ ಬೆದರಿಕೆ: ಜೆಡಿಎಸ್ ಶಾಸಕ ಕೆ.ಮಹದೇವ್

Srinivas Rao BV
ಮೈಸೂರು: ಹಣ ಕೊಟ್ಟರೆ ಪಕ್ಷದಲ್ಲಿರುತ್ತೇನೆ, ಇಲ್ಲದಿದ್ದಲ್ಲಿ ರಾಜೀನಾಮೆ ನೀಡುತ್ತೇನೆ ಎಂದು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಬೇಡಿಕೆ ಇಟ್ಟಿದ್ದರು ಎಂದು ಪಿರಿಯಾಪಟ್ಟಣ ಜೆಡಿಎಸ್ ಶಾಸಕ ಕೆ ಮಹದೇವ್​ ಸ್ಫೋಟಕ ಮಾಹಿತಿ ನೀಡಿದ್ದಾರೆ.
ಪಿರಿಯಾಪಟ್ಟಣ ನಗರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಣಕ್ಕಾಗಿ ಪಕ್ಷಾಂತರ ಮಾಡುತ್ತಿದ್ದಾರೆ ಎಂಬ ಅರ್ಥದಲ್ಲಿ ಶಾಸಕ ಕೆ ಮಹದೇವ್ ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿ ಭೇಟಿ ವೇಳೆ ನಾನೂ ಸಹ ಸ್ಥಳದಲ್ಲಿದ್ದೆ. ಆಗ ಮುಖ್ಯಮಂತ್ರಿ ಅವರಿಗೆ ನೇರವಾಗಿ 80 ಕೋಟಿ ರೂ ಹಣ ನೀಡಿದರೆ ಮಾತ್ರ ಪಕ್ಷದಲ್ಲಿ ಉಳಿದುಕೊಂಡು ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡುತ್ತೇನೆ, ಇಲ್ಲದಿದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದು ಸಭೆಯಲ್ಲಿ ತಿಳಿಸಿದ್ದಾರೆ.
ಹಣಕ್ಕಾಗಿ ರಮೇಶ್ ಜಾರಕಿಹೊಳಿ ಮಾರಾಟವಾಗಿದ್ದಾರೆ ಎಂಬ ಉದ್ದೇಶದಲ್ಲಿಯೇ ಮಾತನಾಡಿದ ಶಾಸಕ ಕೆ ಮಹದೇವ್ , ಬಿಜೆಪಿಯ ಕೆಲವು ಮುಖಂಡರು ತಮಗೂ 30 ರಿಂದ 40  ಕೋಟಿ ರೂಪಾಯಿ ಹಣವನ್ನು ನೀಡಲು 3 ಬಾರಿ ತಮ್ಮ ಮನೆ ಬಳಿಗೆ ಬಂದಿದ್ದರು‌. ಆದರೆ ನಾನು‌  ಹಣವೂ ಬೇಡ ನಿಮ್ಮ ಸಹವಾಸವೂ ಬೇಡ ಎಂದು ತಿರಸ್ಕರಿಸಿದೆ. ಹಣಕ್ಕಾಗಿ ನಮ್ಮನ್ನೇ ನಾವು ಮಾರಿಕೊಳ್ಳುವುದಿಲ್ಲ ಎಂದು ಬಿಜೆಪಿ ನಾಯಕರಿಗೆ ಹೇಳಿ ಕಳುಹಿಸಿದ್ದಾಗಿ ಸಭೆಯಲ್ಲಿ ಮಹದೇವ್ ಪ್ರಸ್ತಾಪಿಸಿದ್ದಾರೆ.   ಎಲ್ಲ ಶಾಸಕರನ್ನು ಮುಖ್ಯಮಂತ್ರಿ  ಒಟ್ಟಿಗೆ ಕರೆದೊಯ್ಯಬೇಕು. ಇಲ್ಲದಿದ್ದರೆ ರಾಜೀನಾಮೆ ಕೊಡುವುದಾಗಿ ಕುಮಾರಸ್ವಾಮಿಗೆ ಕಾಂಗ್ರೆಸ್ ಶಾಸಕರು ಬೆದರಿಸುತ್ತಾರೆ. ನಿರಂತರವಾಗಿ ಇಂತಹ ಪ್ರಸಂಗಗಳು ನಡೆಯುತ್ತಿವೆ. ದುಡ್ಡು  ಕೊಡದಿದ್ದರೆ ರಾಜೀನಾಮೆ ಕೊಡುತ್ತೇವೆ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ ಎಂದು ಪರೋಕ್ಷವಾಗಿ ಶಾಸಕರು ಬ್ಲಾಕ್ ಮೇಲ್ ಮಾಡುತ್ತಿದ್ದಾರೆಂದು ಆರೋಪಿಸಿದರು. 
ಒಂದು ಬಾರಿ ಬಿಜೆಪಿ ನಾಯಕರು 30-40 ಕೋಟಿ ರೂಪಾಯಿ ಹಣ ತಂದು ಆಮಿಷವೊಡ್ಡಿದ್ದರು.  ಆದರೆ  ಈ ಹಣವನ್ನು ವಾಪಸ್ ತೆಗೆದುಕೊಂಡು ಹೋಗದಿದ್ದರೆ ಎಸಿಬಿ ಪೊಲೀಸರಿಗೆ ದೂರು ನೀಡುತ್ತೇನೆ ಎಂದು  ಎಚ್ಚರಿಕೆ ಕೊಟ್ಟಿದ್ದಕ್ಕೆ  ಹಣದ ಜೊತೆ ಬಿಜೆಪಿ ನಾಯಕರು ವಾಪಸ್​ ತೆರಳಿದರು ಎಂದು ಹೇಳಿದ್ದಾರೆ.
SCROLL FOR NEXT