ರಾಜಕೀಯ

ಶಾಸಕರ ವಿಪ್ ವಿಷಯ ಮೊದಲು ಇತ್ಯರ್ಥವಾಗಲಿ ಬಳಿಕ ವಿಶ್ವಾಸಮತ: ಸಿದ್ದರಾಮಯ್ಯ

Shilpa D
ಬೆಂಗಳೂರು: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ನಿರ್ಣಯ ಮಂಡಿಸಿದ್ದು, ಇದರ ಮೇಲೆ ನಡೆದ ಚರ್ಚೆ ಹಲವು ದಿಕ್ಕಿನೆಡೆಗೆ ತಿರುಗಿ, ಆರೋಪ-ಪ್ರತ್ಯಾರೋಪ, ಗದ್ದಲದ ಬಳಿಕ ಸ್ಪೀಕರ್ ಕಲಾಪವನ್ನು ಮಧ್ಯಾಹ್ನ ಮೂರು ಗಂಟೆಗೆ ಮುಂದೂಡಿದರು.
ಮೊದಲು ವಿಪ್ ಬಗ್ಗೆ ನಿರ್ಧಾರವಾಗಬೇಕು, ಅಲ್ಲಿಯವರೆಗೆ ವಿಶ್ವಾಸಮತ ಯಾಚನೆ ಪ್ರಸ್ತಾಪವನ್ನು ಮುಂದೂಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು. ಆಗ ಸ್ಪೀಕರ್ ರಮೇಶ್ ಕುಮಾರ್ ಸದನವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.
ಬೆಳಗ್ಗೆ ಕಲಾಪ ಆರಂಭಾವಾದಾಗ ನಿರ್ಣಯ ಮಂಡಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ನಮಗಂತು ಮಾನ ಮರ್ಯಾದೆ ಇದೆ. ಅವರಿಗೆ ಮಾನ ಮರ್ಯಾದೆ ಇದೆಯೋ ಇಲ್ಲವೋ ತಿಳಿದಿಲ್ಲ. ಎಲ್ಲದಕ್ಕೂ ತಿಲಾಂಜಲಿ ನೀಡಬೇಕಿದೆ. ಮೈತ್ರಿ ಸರ್ಕಾರದ ಮುಂದೆ ಹಲವಾರು ರೀತಿಯ ಸಮಸ್ಯೆಗಳಿವೆ. ಈ ಎಲ್ಲಾ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿದೆ ಎಂದು ಹೇಳಿದರು.
ರಮೇಶ್‌ಕುಮಾರ್‌ ಅವರಂಥ ಅಧ್ಯಯನಶೀಲರು ನನ್ನ ಅವಧಿಯಲ್ಲಿ ಸ್ಪೀಕರ್‌ ಆಗಿದ್ದು ನನ್ನ  ಸೌಭಾಗ್ಯ. ನನ್ನ ತಂದೆ ಮುಖ್ಯಮಂತ್ರಿಯಾದಾಗಲೂ ತಾವೇ ಸ್ಪೀಕರ್‌ ಆಗಿದ್ದಿರಿ. ಆಗಲೂ  ರಾಜಕೀಯ ವಿಪ್ಲವಗಳು ನಡೆದಿದ್ದವು. ಈಗಲೂ ನಡೆಯುತ್ತಿವೆ, ಕಾಲಮಿತಿಯೊಳಗೆ ವಿಶ್ವಾಸ ಮತ  ಪೂರ್ಣಗೊಳಿಸಬಾರದು, ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದರು . 
ನಾವು  ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದೇನೆ ಎನ್ನುವ ಅತೃಪ್ತ ಶಾಸಕರು ನ್ಯಾಯಾಲಯದಲ್ಲಿ ಬೇರೆಯ ರೀತಿಯಲ್ಲಿ ಹೇಳಿ ನನ್ನ ಮೇಲೆ ಆರೋಪ ಮಾಡಿದ್ದಾರೆ. 14 ತಿಂಗಳ ರಾಜಕೀಯ ಅಸ್ಥಿರಕ್ಕೆ ಯಾರು ಕಾರಣ, ಏನೇನು  ನಡೆದಿದೆ ಎಂಬುದರ ಅರಿವು ನನಗಿದೆ, ಈ ಬಗ್ಗೆ ಚರ್ಚೆ ನಡೆಯಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.
ಇದೇ ವೇಳೆ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ, ಸದನದ ಶಾಸಕರ ಸಂಖ್ಯೆ ಗಮನಿಸಿ ಕೆಲವರಿಗೆ ಮಾತ್ರ ಮಾತನಾಡಲು ಅವಕಾಶ ಕೊಡಿ, ಒಂದೇ ದಿನದಲ್ಲಿ ಚರ್ಚೆ ಮುಗಿಸಿದ ನಿದರ್ಶನಗಳು ನಮ್ಮ ಮುಂದೆ ಇವೆ. ಬೇಗನೇ ನಿರ್ಣಯವನ್ನು ಮತಕ್ಕೆ ಹಾಕಿ ಎಂದು ಬೇಡಿಕೆ ಮಂಡಿಸಿದರು. ಮಾತು ಮುಂದುವರಿಸಿದ ಕುಮಾರಸ್ವಾಮಿ, ರಾಜ್ಯ ಸರ್ಕಾರ ಲೂಟಿ ಸರ್ಕಾರವಲ್ಲ, ಬರಗಾಲ, ಕೊಡಗಿನ ನೆರೆಯಂಥ ಸಂದರ್ಭಗಳನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ ಎಂದು ಸರ್ಕಾರದ ಕೆಲಸಗಳನ್ನು ವಿವರಿಸಿದರು.
ಒಂದು ಸಾಲಿನ ರಾಜೀನಾಮೆ ಪತ್ರ ಸಲ್ಲಿಸಿದ ಶಾಸಕರು, ಜಿಂದಾಲ್ ಭೂಮಿ ಮಾರಾಟದಲ್ಲಿ ಭ್ರಷ್ಟಾಚಾರ ನಡೆದಿದೆ, ಕೋಟಿಗಟ್ಟಲೇ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ, ಇಂತಹ ಸರ್ಕಾರ ಬೇಡವೆಂಬ ಕಾರಣಕ್ಕಾಗಿ ನಾವು ರಾಜೀನಾಮೆ ನೀಡಿದ್ದೇವೆ ಎಂದು ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. 
ಅಂತಹ ಆಪಾದನೆಗಳಿಗೆ ದೇಶದ ಜನರಿಗೆ, ನಾಡಿನ ಜನರಿಗೆ ಉತ್ತರ ಕೊಡಬೇಕಿದೆ. ಅನೇಕ ಸವಾಲುಗಳನ್ನು ಎದುರಿಸಿ ಸರ್ಕಾರ ನಡೆಸಿದ್ದೇನೆ. ಅವೆಲ್ಲ ವಿಷಯಗಳ ಬಗ್ಗೆಯೂ ಚರ್ಚೆ ಮಾಡಿ ಜನರಲ್ಲಿ ಹೇಗೆ ವಿಶ್ವಾಸ ಉಳಿಸಿಕೊಂಡಿದ್ದೇವೆ ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯಬೇಕಿದೆ. ಜನರಿಗೆ ಸದನದ ಮೂಲಕವೇ ಸ್ಪಷ್ಟನೆ ನೀಡಬೇಕಿದೆ ಎಂದು ಹೇಳಿದರು. ಒಳ್ಳೆಯ ರೀತಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಿ ಎಂದು ಹೇಳುವ ಮೂಲಕ ಯಡಿಯೂರಪ್ಪನವರು ನನ್ನ ಬಗ್ಗೆ ಅನುಕಂಪ ತೋರಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ವಿಶ್ವಾಸ ಮತಯಾಚನೆ ಸಂವಿಧಾನದ ಚೌಕಟ್ಟಿನಲ್ಲಿ ನಡೆಯಬೇಕಿದೆ. ಮೈತ್ರಿ ಸರ್ಕಾರ ಇರುತ್ತದೋ ಹೋಗುತ್ತದೆಯೇ ಎಂಬುದು ಮುಖ್ಯವಲ್ಲ, ಪ್ರಜಾಪ್ರಭುತ್ವದ ಅಣಕದ ನಾಟಕ ನಡೆಯುತ್ತಿದೆ ಎಂಬುದು ಚರ್ಚೆ ಮಾಡಬೇಕಿದೆ.  ಅಧಿಕಾರ ಎಂಬುದು ಶಾಶ್ವತ ಅಲ್ಲ. ಶಾಶ್ವತವಾಗಿ ಗೂಟ ಹೊಡೆದುಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದರು.
ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕ್ರಿಯಾಲೋಪವೆತ್ತಿ   ಶಾಸಕಾಂಗ ಪಕ್ಷದ ನಾಯಕನಿಗೆ ವಿಪ್ ನೀಡಲು ಅವಕಾಶವಿಲ್ಲ ಎಂದು ನ್ಯಾಯಾಲಯದ ತೀರ್ಪಿನಲ್ಲಿ  ಉಲ್ಲೇಖಿಸಲಾಗಿದೆ. ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪಿನಿಂದ ನನ್ನ ವಿಪ್ ಅಧಿಕಾರಕ್ಕೆ  ಚ್ಯುತಿ ಉಂಟಾಗಿದೆ ಎಂದು ಹೇಳಿದರು ಪಕ್ಷಾಂತರ  ನಿಷೇಧಿಸುವ 10ನೇ ಶೆಡ್ಯೂಲ್ ಸಂವಿಧಾನದಲ್ಲಿ ಇನ್ನೂ ಅಸ್ತಿತ್ವದಲ್ಲಿದೆ. ಆದರೆ  ಶಾಸಕಾಂಗ ಪಕ್ಷದ ನಾಯಕನಿಗೆ ವಿಪ್ ನೀಡಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿರುವ  ಆದೇಶ ನನ್ನ ಹಕ್ಕಿನ ಚ್ಯುತಿಯಾಗಿದೆ. ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿರುವುದು ಒಂದು ಕುಟಿಲ ತಂತ್ರ ಎಂದು ಸಿದ್ದರಾಮಯ್ಯ ಹೇಳಿದರು.
ಪಕ್ಷಾಂತರ ನಿಷೇಧದ ಬಗ್ಗೆ ಚರ್ಚೆ ಆಗಿರಲಿಲ್ಲ. 1967 ರಲ್ಲಿ ಅಸ್ಸಾಂ ದಯಾಲಾಲ್ ಎಂಬವರು ಒಂದೇ ದಿನ ಮೂರು ಪಕ್ಷಗಳಿಗೆ ಪಕ್ಷಾಂತರ ಮಾಡಿದರು. ಇದು ಪ್ರಜಾಪ್ರಭುತ್ವ ಅಡಿಗಲ್ಲನ್ನು ಅಲ್ಲಾಡಿಸಿತು. ಕಡಿವಾಣ ಹಾಕಲು 52ನೇ ಸಂವಿಧಾನ ತಿದ್ದುಪಡಿ ಮಾಡಲಾಯಿತು. ಸಂವಿಧಾನಕ್ಕೆ ನಿಜವಾದ ಗೌರವ ಸಲ್ಲಿಸಬೇಕಿದ್ದರೆ ಪ್ರಜಾಪ್ರಭುತ್ವದಲ್ಲಿ ಪಕ್ಷಾಂತರ ರೋಗವನ್ನು ತೊಲಗಿಸಬೇಕಾದರೆ ಪಕ್ಷಾಂತರ ನಿಷೇಧ ಕಾಯ್ದೆ ಸರಿಯಾಗಿ ಜಾರಿಯಾಗಬೇಕು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.
ಆ ಸಮಯದಲ್ಲಿ ಕೆ.ಜಿ.ಬೋಪಯ್ಯ ಮಧ್ಯಪ್ರವೇಶಿಸಿ, ಚರ್ಚೆ ಆಗದೆ ಸದನದಲ್ಲಿ‌ ವಿಶ್ವಾಸ ಮತ ಕೇಳಬಹುದು, ಇದಕ್ಕೆ ಹಿಂದಿನ ಹಲವಾರು ನಿದರ್ಶನಗಳಿವೆ ಎಂದು ಹೇಳಿದರು.
ಬೋಪಯ್ಯ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಡಿ ಕೆ ಶಿವಕುಮಾರ್, ಸುಪ್ರೀಂ ಕೋರ್ಟ್ ನಿಮ್ಮ ಸಲಹೆಯನ್ನು ಹೇಗೆ ಪರಿಗಣಿಸಿದೆ ಎಂಬುದನ್ನು ತಿಳಿದಿದೆ ಎಂದು ತಿರುಗೇಟು ನೀಡಿದರು. 
ವೆಂಕಟರಮಣಪ್ಪ ಮಾತನಾಡಿ, ಸ್ಪೀಕರ್ ಆಗಿ ಬೋಪಯ್ಯ ಹೇಗೆ  ವರ್ತಿಸಿದರು ಎಂಬುದು ಎಲ್ಲರಿಗೂ ತಿಳಿದಿದೆ. ಅವರಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ ಎಂದು ಬೋಪಯ್ಯ ಅವರ ಕಾಲೆಳೆದರು.
ಸಮಸ್ಯೆ ಆಗುತ್ತಿರುವುದು ಮಾಜಿ ಮುಖ್ಯಮಂತ್ರಿ, ಹಾಲಿ ಮುಖ್ಯಮಂತ್ರಿ ಹಾಗೂ ಭಾವಿ ಮುಖ್ಯಮಂತ್ರಿ ನಡುವೆ, ಇವುಗಳ ನಡುವೆ ನಾವು ಸಿಲುಕಿದ್ದೇವೆ ಎಂದು ಸ್ಪೀಕರ್ ರಮೇಶ್ ಕುಮಾರ್ ಈ ಮಧ್ಯೆ ಚಟಾಕಿ ಹಾರಿಸಿದರು. ಭಾಷಣದ ವೇಳೆ ವಿಪಕ್ಷ ನಾಯಕನಾದ ನಾನು ಎಂದು ಸಿದ್ದರಾಮಯ್ಯ ಹೇಳಿದಾಗ,  ವಿಪಕ್ಷ ಶಾಸಕರು ಮೇಜು ಬಡಿದು ಖುಷಿ ವ್ಯಕ್ತಪಡಿಸಿದರು.  ಏನ್‌ ಖುಷಿ ಇವರಿಗೆ ನೋಡಿ, ನಾನು ನಾಲ್ಕು ವರ್ಷ ವಿಪಕ್ಷ ಸ್ಥಾನದಲ್ಲೇ ಇದ್ದೆ ಎಂದ ಸಿದ್ದರಾಮಯ್ಯ ನೆನಪಿಸಿದರು.
SCROLL FOR NEXT