ರಾಜಕೀಯ

ರಾಜ್ಯಪಾಲರಿಂದ ಬಂದ 2ನೇ'ಲವ್ ಲೆಟರ್ 'ನೋವುಂಟು ಮಾಡಿದೆ- ಕುಮಾರಸ್ವಾಮಿ

Nagaraja AB
ಬೆಂಗಳೂರು: ಇಂದು ಸಂಜೆ 6 ಗಂಟೆಯೊಳಗೆ ವಿಶ್ವಾಸಮತ ಯಾಚಿಸುವಂತೆ ರಾಜ್ಯಪಾಲ ವಜೂಬಾಯಿ ವಾಲಾ ಅವರಿಂದ ಬಂದ 2ನೇ  ಲವ್ ಲೆಟರ್ ತಮ್ಮಗೆ ನೋವುಂಟು ಮಾಡಿದೆ  ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಹೇಳಿದರು.
ವಿಶ್ವಾಸಮತ ನಿರ್ಣಯ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಪಕ್ಷೇತರ ಶಾಸಕ ಹೆಚ್ ನಾಗೇಶ್  ಅವರನ್ನು  ವಿಮಾನಕ್ಕೆ  ಹತ್ತಿಸುತ್ತಿದ್ದ ಬಿಎಸ್ ಯಡಿಯೂರಪ್ಪ ಅವರ ಆಪ್ತ ಸಂತೋಷ್ ಅವರ ಪೋಟೋವನ್ನು ಸದನದಲ್ಲಿ   ಪ್ರದರ್ಶಿಸಿ, 10 ದಿನಗಳಿಂದಲೂ ನಡೆಯುತ್ತಿರುವ ಕುದುರೆ ವ್ಯಾಪಾರ ಬಗ್ಗೆ ತಿಳಿಯಲು ಮಾತ್ರ ರಾಜ್ಯಪಾಲರು ಬರುತ್ತಿದ್ದಾರೆ ಎಂದರು. 
ವಿಶ್ವಾಸಮತ ನಿರ್ಧಾರವನ್ನು ಸ್ಪೀಕರ್ ಅವರಿಗೆ ಬಿಡುತ್ತೇನೆ. ಅದು ದೆಹಲಿಯಿಂದ ನಿರ್ಧಾರವಾಗಬೇಕಿಲ್ಲ. ರಾಜ್ಯಪಾಲರಿಂದ ಬಂದಿರುವ ಆದೇಶದಿಂದ ತಮ್ಮನ್ನು ರಕ್ಷಿಸುವಂತೆ ಸ್ವೀಕರ್ ರಮೇಶ್ ಕುಮಾರ್ ಬಳಿ ಮುಖ್ಯಮಂತ್ರಿ ಮನವಿ ಮಾಡಿದರು.
ಈ ಮಧ್ಯೆ ಇಂದು ಸಂಜೆಯೊಳಗೆ ವಿಶ್ವಾಸಮತ ಯಾಚಿಸುವಂತೆ ರಾಜ್ಯಪಾಲರು ಮತ್ತೆ ಗಡುವು ವಿಧಿಸಿರುವುದನ್ನು ಪ್ರಶ್ನಿಸಿ ಕುಮಾರಸ್ವಾಮಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ವಿಶ್ವಾಸಮತ ನಿರ್ಣಯವನ್ನು ಈಗಾಗಲೇ ಮಂಡಿಸಿರುವಾಗ ರಾಜ್ಯಪಾಲರಿಂದ ಮತ್ತೊಂದು ನಿರ್ದೇಶನದ ಅಗತ್ಯವಿರಲಿಲ್ಲ ಎಂದು ಕುಮಾರಸ್ವಾಮಿ ಅರ್ಜಿಯಲ್ಲಿ ತಿಳಿಸಿದ್ದಾರೆ.
ವಿಶ್ವಾಸಮತ ನಿರ್ಣಯ ಕುರಿತು ಸದನದಲ್ಲಿ ಚರ್ಚೆ ನಡೆಯುತ್ತಿರುವಾಗ ರಾಜ್ಯಪಾಲರು ಆದೇಶ ಮಾಡಬಾರದೆಂದು ಉಲ್ಲೇಖಿಸಿರುವ ಕುಮಾರಸ್ವಾಮಿ,  15 ಬಂಡಾಯ ಶಾಸಕರು ಕಲಾಪದಲ್ಲಿ ಭಾಗವಹಿಸುವ ಅಥವಾ ಗೈರಾಗುವ ಆಯ್ಕೆಯನ್ನು ಅವರ ವಿವೇಚನೆಗೆ ಬಿಟ್ಟಿರುವ ಬಗ್ಗೆಯೂ ಸ್ಪಷ್ಟನೆ ನೀಡುವಂತೆ ಮುಖ್ಯಮಂತ್ರಿ ಕೋರಿದ್ದಾರೆ.
ಇಂದು ಮಧ್ಯಾಹ್ನ 1-30ಕ್ಕೆ ವಿಶ್ವಾಸಮತಯಾಚಿಸುವಂತೆ ರಾಜ್ಯಪಾಲರು ಗುರುವಾರ ಆದೇಶ ಹೊರಡಿಸಿದ್ದರು. ಇಂದು ಆ ಗಡುವು ಮುಗಿದ ಬಂದರೂ ವಿಶ್ವಾಸ ಮತಯಾಚಿಸದ ಹಿನ್ನೆಲೆಯಲ್ಲಿ  ಮತ್ತೆ ಕುಮಾರಸ್ವಾಮಿ ಅವರಿಗೆ ಮತ್ತೊಂದು ಪತ್ರ ಕಳುಹಿಸಿದ ರಾಜ್ಯಪಾಲರು ಸಂಜೆ 6 ಗಂಟೆಯೊಳಗೆ ವಿಶ್ವಾಸಮತಯಾಚಿಸುವಂತೆ ಸೂಚನೆ ನೀಡಿದ್ದಾರೆ.
SCROLL FOR NEXT