ರಾಜಕೀಯ

ಮುಂದುವರೆದ ಎಚ್ ಡಿ ರೇವಣ್ಣ ಟೆಂಪಲ್ ರನ್; ಸರ್ಕಾರದ ಉಳಿವಿಗಾಗಿ ಶಾರದಾಂಬೆ ಮೊರೆ!

Srinivasamurthy VN
ಚಿಕ್ಕಮಗಳೂರು: ದೋಸ್ತಿ ಸರ್ಕಾರದ ವಿಶ್ವಾಸ ಮತ ಯಾಚನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರ ಟೆಂಪಲ್ ರನ್ ಮುಂದುವರೆದಿದ್ದು, ಶೃಂಗೇರಿ ಶಾರದಾಂಭೆ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸೋಮವಾರ ವಿಧಾನಸಭೆ ಕಲಾಪದಲ್ಲಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡುವ ಸಾಧ್ಯತೆ ಇದ್ದು, ಸರ್ಕಾರದ ಅಳಿವು-ಉಳಿವಿನ ಭವಿಷ್ಯ ನಿರ್ಧಾರವಾಗಲಿದೆ. ಹೀಗಾಗಿ ರೇವಣ್ಣ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಭೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. 
ಇಂದು ಬೆಳಗಿನ ಜಾವ 5.30ಕ್ಕೆ ಶಾರದಾಂಭೆ ಹಾಗೂ ತೋರಣ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ 7.30ಕ್ಕೆ ಹಿಂದಿರುಗಿದ್ದಾರೆ. ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಸಂಕಷ್ಟದಿಂದ ಪಾರು ಮಾಡಲು ಅವರು ದೇವರ ಮೊರೆ ಹೋಗುತ್ತಿದ್ದಾರೆ. ಜುಲೈ 9 ರಂದು ಅವರು ಶೃಂಗೇರಿಗೆ ಬಂದಿದ್ದರು. ಇದೇ ಜುಲೈ ತಿಂಗಳಲ್ಲೇ ಮೂರು ಬಾರಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಎಚ್. ಡಿ. ದೇವೇಗೌಡರ ಕುಟುಂಬ ಹಲವು ಬಾರಿ ಶೃಂಗೇರಿ ದೇಗುಲಕ್ಕೆ ಭೇಟಿ ಕೊಟ್ಟಿದೆ. ಹಲವು ಹೋಮ, ವಿಶೇಷ ಪೂಜೆಗಳನ್ನು ಸಲ್ಲಿಸಿದೆ. ಸೋಮವಾರ ಮಹತ್ವದ ದಿನವಾದ ಕಾರಣ ಭಾನುವಾರ ವಿಶೇಷ ಪೂಜೆ ಮಾಡಿಸಲಾಗಿದೆ. ಗುರುವಾರ ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತದ ಮೇಲಿನ ಚರ್ಚೆಯನ್ನು ಆರಂಭಿಸಲಾಗಿದೆ. ಸೋಮವಾರ ಈ ಚರ್ಚೆ ಪೂರ್ಣಗೊಳ್ಳಲಿದ್ದು, ಮತದಾನ ನಡೆಯಲಿದೆ. 
SCROLL FOR NEXT