ರಾಜಕೀಯ

ಆರ್ ಶಂಕರ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಶಾಸಕತ್ವ ಅನರ್ಹಗೊಳಿಸಿ ಸ್ಪೀಕರ್ ಆದೇಶ

Lingaraj Badiger
ಬೆಂಗಳೂರು: ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾಂಗ್ರೆಸ್ ಶಾಸಕರಾದ ಆರ್ ಶಂಕರ್, ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಅವರನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ಅವರು ಗುರುವಾರ ಆದೇಶ ನೀಡಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ ಅವರು, ಈ ಮೂವರು ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ನೀಡಿದ ದೂರಿನ ಆಧಾರದ ಅನರ್ಹಗೊಳಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ(ಕೆಪಿಜೆಪಿ) ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದ ಆರ್. ಶಂಕರ್ ಅವರು ತಮ್ಮ ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ ಜತೆ ವಿಲೀನಗೊಳಿಸಿದ್ದರು.
ಪಕ್ಷಾಂತರ ನಿಷೇಧ ಕಾಯ್ದೆಯಡಿ ರಾಣೆಬೆನ್ನೂರು ಶಾಸಕ ಆರ್ ಶಂಕರ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಮೂರು ವರ್ಷ 10 ಕಾಲ ಅನರ್ಹಗೊಳಿಸಲಾಗಿದೆ. 2023 ಮೇ ತಿಂಗಳವರೆಗೆ ಈ ಮೂವರ ಅನರ್ಹತೆ ಊರ್ಜಿತದಲ್ಲಿರುತ್ತದೆ ಎಂದು ಸ್ಪೀಕರ್ ಹೇಳಿದೆರು.
ಅನರ್ಹಗೊಂಡ ಶಾಸಕರು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಈ ವಿಧಾನಸಭೆ ಅವಧಿ ಇರುವವರೆಗೂ ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ರಮೇಶ್‌ ಕುಮಾರ್‌ ಸ್ಪಷ್ಟಪಡಿಸಿದರು. 

ಉಳಿದ 13 ಅತೃಪ್ತ ಶಾಸಕರ ‌ರಾಜೀನಾಮೆ‌ ವಿಚಾರವನ್ನು ಶೀಘ್ರವಾಗಿ ಇತ್ಯರ್ಥ ‌ಮಾಡಲಾಗುವುದು. ವಾರ, ತಿಂಗಳಲ್ಲ, ಕೆಲವೇ ದಿನಗಳಲ್ಲಿ ಇತ್ಯರ್ಥಪಡಿಸಲಾಗುವುದು ಎಂದು ಸ್ಪೀಕರ್ ತಿಳಿಸಿದರು.
SCROLL FOR NEXT