ರಾಜು ಕಾಗೆ ಮತ್ತು ಉಮೇಶ್ ಕತ್ತಿ
ಬೆಳಗಾವಿ: ನಾಟಕೀಯ ರೀತಿಯಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಂಡ ಮೇಲೆ, ಕಾಂಗ್ರೆಸ್ ಹೊಸ ತಂತ್ರಗಾರಿಕೆನ್ನು ರೂಪಿಸುತ್ತಿದೆ. ಬಿಜೆಪಿ ತಿರುಗೇಟು ನೀಡಲು ಹವಣಿಸುತ್ತಿರುವ ಕಾಂಗ್ರೆಸ್ ಕೇಸರಿ ಪಾಳೆಯದ ಅತೃಪ್ತರನ್ನು ತನ್ನತ್ತ ಸೆಳೆಯಲು ಯೋಜನೆ ರೂಪಿಸುತ್ತಿದೆ.
ಮುಂದಿನ ಆರು ತಿಂಗಳಲ್ಲಿ ವಿಧಾನಸಭೆಗೆ ಉಪ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಆಯಾ ಕ್ಷೇತ್ರಗಳ ಜನಪ್ರಿಯ ಮುಖಂಡರು ಹಾಗೂ ಟಿಕೆಟ್ ವಂಚಿತ ಅಸಮಾಧಾನಿತರನ್ನು, ಸೆಳೆಯಲು ಎಲ್ಲಾ ರೀತಿಯ ತಂತ್ರ ಎಣೆಯುತ್ತಿದ್ದಾರೆ. ಬಂಡಾಯ ಶಾಸಕರ ರಾಜೀನಾಮೆ ಅಂಗೀಕಾರವಾದ ಮೇಲೆ ಉಪ ಚುನಾವಣೆ ನಡೆಯಲಿದೆ.
ಬಿಜೆಪಿ ಸರ್ಕಾರ ರಚನೆ ಮಾಡಲಿ, ಸಂಪುಟ ರಚನೆಯೂ ಆಗಲಿ, ಅದಾದ ನಂತರ ಸ್ಥಾನ ಸಿಗದೇ ಬಂಡಾಯ ಎದ್ದವರನ್ನು ತನ್ನತ್ತ ಸೆಳೆದುಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ. ಎಲ್ಲರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಾಧ್ಯವಾಗದ ಕಾರಣ ಕೆಲವು ಮಂದಿಗೆ ಸಹಜವಾಗಿಯೇ ಅಸಮಾಧಾನ ಭುಗಿಲೇಳುತ್ತದೆ. ಹೀಗಾಗಿ ಪಕ್ಷ ಬಿಡಲು ಹಲವು ಬಿಜೆಪಿ ಶಾಸಕರು ತಯಾರಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ರಾಜು ಕಾಗೆ ವಿರುದ್ಧ ಕಾಂಗ್ರೆಸ್ ನ ಶ್ರೀಮಂತ ಪಾಟೀಲ್ ಗೆಲುವು ಸಾಧಿಸಿದ್ದರು, ಒಂದು ವೇಳೆ ಶ್ರೀಮಂತ ಪಾಟೀಲ್ ಬಿಜೆಪಿಯಿಂದ ಸ್ಪರ್ಧಿಸಿದರೇ ತಾವು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ರಾಜು ಕಾಗೆ ತಿಳಿಸಿದ್ದಾರೆ.
ಇನ್ನೂ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ರಾಜು ಕಾಗೆ ಅವರನ್ನು ಸಂಪರ್ಕಿಸಿ, ಶ್ರೀಮಂತ ಪಾಟೀಲ್ ವಿರುದ್ಧ ಕಾಂಗ್ರೆಸ್ ನಿಂದ ಕಣಕ್ಕಿಳಿಯುಂತೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ, ಸರ್ಕಾರ ಉರುಳಿಸಲು ಕಾರಣವಾದ ಬಂಡಾಯ ಶಾಸಕರ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶಗೊಂಡಿದ್ದು, ಅವರಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ಎಲ್ಲಾ ಬಂಡಾಯ ಕಾಂಗ್ರೆಸ್ ಶಾಸಕರನ್ನು ಸೋಲಿಸಲು ಕೈ ನಾಯಕರು ತಂತ್ರ ರೂಪಿಸುತ್ತಿದ್ದಾರೆ.
ಹುಕ್ಕೇರಿ ಕ್ಷೇತ್ರದಿಂದ 8 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಉಮೇಶ್ ಕತ್ತಿ, ಬಿಜೆಪಿ ಸರ್ಕಾರದಲ್ಲಿ ತಮ್ಮನ್ನು ಮಂತ್ರಿ ಮಾಡುತ್ತಾರೆ ಎಂಬ ಭರವಸೆಯಲ್ಲಿದ್ದಾರೆ, ಆದರೆ ಬಾಲಚಂದ್ರ ಜಾರಕಿಹೊಳಿಗೆ ಸ್ಥಾನ ನೀಡಬೇಕಾದ ಹಿನ್ನೆಲೆಯಲ್ಲಿ ಉಮೇಶ್ ಕತ್ತಿ ಅವರನ್ನು ನಿರ್ಲಕ್ಷ್ಯಿಸಲಾಗುತ್ತದೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ, ಹೀಗಾಗಿ ಕತ್ತಿ ಅವರನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ
ಮಾಜಿ ಶಾಸಕ ರಮೇಶ್ ಕತ್ತಿ ಅವರಿಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿಯಿಂದ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿದ ಕಾರಣ ಉಮೇಶ್ ಕತ್ತಿ ಕುಟುಂಬ ಬಿಜೆಪಿ ವಿರುದ್ಧ ಬೇಸರಗೊಂಡಿದೆ. ಇದರ ಅಡ್ವಾಂಟೇಜ್ ತೆಗೆದುಕೊಳ್ಳಲು ಕಾಂಗ್ರೆಸ್ ಮುಂದಾಗಿದೆ