ರಾಜಕೀಯ

15 ಶಾಸಕರ ಅನರ್ಹತೆ: ಸ್ಪೀಕರ್ ರಮೇಶ್ ಕುಮಾರ್ ನಡೆ ಬಗ್ಗೆ ಬಿಜೆಪಿ ಹೇಳಿದ್ದಿಷ್ಟು!

Srinivas Rao BV
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಭಾಗವಾಗಿದ್ದ 15 ಬಂಡಾಯ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರವನ್ನು ಬಿಜೆಪಿ ಖಂಡಿಸಿದೆ. 
ಸ್ಪೀಕರ್ ರಮೇಶ್ ಕುಮಾರ್ ಸುದ್ದಿಗೋಷ್ಟಿ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಗೋವಿಂದ ಕಾರಜೋಳ, ಸ್ಪೀಕರ್ ತೀರ್ಪು ನ್ಯಾಯಸಮ್ಮತವಲ್ಲ ಸ್ಪೀಕರ್ ತಪ್ಪು ನಿರ್ಧಾರ ಕೈಗೊಂಡಿದ್ದಾರೆ, ಸ್ಪೀಕರ್ ನೀಡಿರುವ ತೀರ್ಪನ್ನು ಕೋರ್ಟ್ ಕೂಡ ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ಬಂಡಾಯ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ರಮೇಶ್ ಕುಮಾರ್ ಅಂಗೀಕರಿಸಬೇಕಿತ್ತು. ಕೋರ್ಟ್ ನಲ್ಲಿ ಬಂಡಾಯ ಶಾಸಕರಿಗೆ ನ್ಯಾಯ ಸಿಗಲಿದೆ ಎಂದು ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಾಸಕರು ರಾಜೀನಾಮೆ ನೀಡಿದಾಗ ಅದು ಕಾನೂನುಬದ್ಧವಾಗಿಲ್ಲ, ಫಾರ್ಮೆಟ್ ಪ್ರಕಾರ ರಾಜೀನಾಮೆ ನೀಡಿಲ್ಲ ಎಂದು ಸ್ಪೀಕರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಶಾಸಕರು ಸ್ಪೀಕರ್ ಆದೇಶದಂತೆ ರಾಜೀನಾಮೆ ನೀಡಿದರೂ ಅದನ್ನು ಒಪ್ಪದೇ ಅನರ್ಹಗೊಳಿಸಿದ್ದಾರೆ. ರಾಜೀನಾಮೆ ನೀಡುವುದು ಶಾಸಕರಿಗೆ ಇರುವ ಸಾಂವಿಧಾನಿಕ ಹಕ್ಕು, ಸರ್ಕಾರ ಸರಿಯಾಗಿ ನಿರ್ವಹಿಸದೇ ಇದ್ದಾಗ ರಾಜೀನಾಮೆ ಕೊಡುವ ಹಕ್ಕು ಶಾಸಕರಿಗೆ ಇದೆ. ಶಾಸಕರು ಸ್ವಯಂ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. 
SCROLL FOR NEXT