ರಾಜಕೀಯ

ಸ್ಪೀಕರ್ ತೀರ್ಮಾನ ಸರಿಯಾಗಿಯೇ ಇದೆ: ಮಾಜಿ ಸ್ಪೀಕರ್ ಕೃಷ್ಣಾ ಸಮರ್ಥನೆ

Nagaraja AB
ಮಂಡ್ಯ: ರಾಜೀನಾಮೆ ನೀಡಿದ ಕಾಂಗ್ರೆಸ್- ಜೆಡಿಎಸ್ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರ ಕ್ರಮ ಸರಿಯಾಗಿಯೇ ಇದೆ. ಶಾಸಕರ ವಿರುದ್ಧ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿಯೇ ಅವರು ಸೂಕ್ತ ತೀರ್ಪು ನೀಡಿದ್ದಾರೆ ಎಂದು ಮಾಜಿ ಸ್ಪೀಕರ್ ಕೃಷ್ಣಾ ಸಮರ್ಥಿಸಿಕೊಂಡಿದ್ದಾರೆ.
ಕೆ. ಆರ್. ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ - ಕಾಂಗ್ರೆಸ್ ಪಕ್ಷದ ಶಾಸಕಾಂಗ ನಾಯಕರು ನೀಡಿರುವ ದೂರು ಹಾಗೂ ದಾಖಲೆಗಳನ್ನು ಸ್ಪೀಕರ್ ಗೆ ಒದಗಿಸಿದ್ದಾರೆ. ತೀರ್ಪನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಬಹುದು ಎಂದಿದ್ದಾರೆ.
ಜನತೆ ನೀಡಿರುವ ಅಧಿಕಾರವನ್ನು ಉಳಿಸಿಕೊಳ್ಳುವ ಯೋಗ್ಯತೆ ಜೆಡಿಎಸ್- ಕಾಂಗ್ರೆಸ್ ಪಕ್ಷಗಳಿಗೆ ಇಲ್ಲ. ಎರಡೂ ಪಕ್ಷಗಳ ನಾಯಕರ ಆಂತರಿಕ ಕಲಹದಿಂದ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ರಾಜಕೀಯ ದೊಂಬರಾಟಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಕಾರಣವಾಗಿದ್ದಾರೆ. ಅವರ ಬೆಂಬಲಿಗರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು . ಜೆಡಿಎಸ್ - ಕಾಂಗ್ರೆಸ್ ತಲಾ ಎರಡೂವರೆ ವರ್ಷ ಅಧಿಕಾರ ಹಂಚಿಕೆ ಮಾಡಿಕೊಂಡಿದ್ದರೆ ಈ ಪರಿಸ್ಥಿತಿ ಉದ್ಬವಿಸುತ್ತಿರಲಿಲ್ಲ. ದೇವೇಗೌಡರ ಅಧಿಕಾರದ ಆಸೆಗೆ ಮೈತ್ರಿ ಸರ್ಕಾರವೇ ಕುಸಿದು ಬಿದ್ದಿದೆ. ದೇವೇಗೌಡರಿಗೆ ದುರಾಸೆ ಜಾಸ್ತಿ ಆಗಿದೆ ಎಂದು ಟೀಕಿಸಿದರು.
ಅಧಿಕಾರ ಹಂಚಿಕೆ ಮಾಡಿದ್ದರೆ ಕಾಂಗ್ರೆಸ್ ನಾಯಕರು ಶ್ವಾನದ ರೀತಿ ಅಧಿಕಾರಕ್ಕಾಗಿ ಕಾಯುತ್ತಿದ್ದರು. ರೇವಣ್ಣ ಉಪಮುಖ್ಯಮಂತ್ರಿ ಆಗುವ ದೇವೇಗೌಡರ ಆಸೆ ಈಡೇರುತಿತ್ತು ಎಂದು ಮಾಜಿ ವಿಧಾನಸಭಾ ಸಭಾಧ್ಯಕ್ಷ ಕೃಷ್ಣಾ ವ್ಯಂಗ್ಯವಾಡಿದರು.
SCROLL FOR NEXT