ರಾಜಕೀಯ

ಜೆಡಿಎಸ್ ಪ್ರಾಬಲ್ಯ ಕ್ಷೇತ್ರಗಳಲ್ಲಿ ಗ್ರಾಮ ವಾಸ್ತವ್ಯ: ಮಧ್ಯಂತರ ಚುನಾವಣೆ ಸುಳಿವು ನೀಡಿದ ಕುಮಾರಸ್ವಾಮಿ ನಡೆ

Nagaraja AB
ಬೆಂಗಳೂರು: ಮುಂದಿನ ನಾಲ್ಕೈದು ತಿಂಗಳೊಳಗೆ ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ಅದರಲ್ಲೂ ಪ್ರಮುಖವಾಗಿ ಜೆಡಿಎಸ್ ಪ್ರಾಬಲ್ಯ ಹೊಂದಿರುವ ಕ್ಷೇತ್ರಗಳಲ್ಲಿ ಗ್ರಾಮ ವಾಸ್ತವ್ಯ ನಡೆಸಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಈ ಮೂಲಕ ಅವರು ವಿಧಾನಸಭೆ ಮಧ್ಯಂತರ ಚುನಾವಣೆಗೆ ಸಜ್ಜಾಗುತ್ತಿದ್ದಾರೆಯೇ ಎನ್ನುವ ಪ್ರಬಲ ಅನುಮಾನ ಕಾಡಲಾರಂಭಿಸಿದೆ.
ಉಜಳಂಬದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ನಾಲ್ಕೈದು ತಿಂಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಾಸ್ತವ್ಯ ಮಾಡಲಾಗುವುದು, ಈ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿರುವ ಅನುದಾನಗಳಿಗೆ , ಕಾಮಗಾರಿಗೆ ಆಡಳಿತಾತ್ಮಕ ಮಂಜೂರಾತಿ ನೀಡುವುದಲ್ಲದೆ ಆದಷ್ಟು ಶೀಘ್ರದಲ್ಲಿ ಎಲ್ಲಾ ಕಾಮಗಾರಿಗಳನ್ನು ತಕ್ಷಣ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.
ಆ ಮೂಲಕ ಮಧ್ಯಂತರ ಚುನಾವಣೆಗೂ ಮುನ್ನ ಗ್ರಾಮ ವಾಸ್ತವ್ಯ, ಅನುದಾನ ಬಿಡುಗಡೆ , ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಗೊಳಿಸಿ, ಪಕ್ಷಕ್ಕೆ ಮತ್ತಷ್ಟು ವರ್ಚಸ್ಸು, ಚೈತನ್ಯ ತುಂಬುವ ಕೆಲಸಕ್ಕೆ ಮುಖ್ಯಮಂತ್ರಿ ಪರೋಕ್ಷವಾಗಿ ಚಾಲನೆ ನೀಡಿದ್ದಾರೆ.
ವಿಶೇಷವೆಂದರೆ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯಕ್ಕೆ ಈವರೆಗೂ ಆಯ್ಕೆ ಮಾಡಿಕೊಂಡಿರುವ ನಾಲ್ಕೂ ಗ್ರಾಮಗಳು ಜೆಡಿಎಸ್ ಕ್ಷೇತ್ರಗಳಾಗಿದ್ದವು. ಮೊದಲ ಗ್ರಾಮ ವಾಸ್ತವ್ಯ ಯಾದಗಿರಿ ಜಿಲ್ಲೆಯ ಚಂಡರಕಿ ಗ್ರಾಮ ಹಾಗೂ ಅಪ್ಜಲ್ ಪುರ ತಾಲೂಕಿನ ಹೆರೂರು ಬಿ. ರಾಯಚೂರಿನ ಕರೇಗುಡ್ಡ ಹಾಗೂ ಉಜಳಂಬ ಕ್ಷೇತ್ರವೂ ಮೂಲ ಜೆಡಿಎಸ್ ಕ್ಷೇತ್ರವಾಗಿದೆ. ಆ ಮೂಲಕ ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬುವ , ಪಕ್ಷ ಸಂಘಟಿಸುವ ಕೆಲಸವನ್ನು ಕಾಂಗ್ರೆಸ್ ನಾಯಕರಿಗೆ ಅರಿವಿಲ್ಲದಂತೆ ಮುಖ್ಯಮಂತ್ರಿ ಮಾಡಿ ಮುಗಿಸುತ್ತಿದ್ದಾರೆ.
ಮೈತ್ರಿ ಸರ್ಕಾರ ಎಷ್ಟು ದಿನದಲ್ಲಿ ಪತನವಾದರೆ ಅಷ್ಟು ಒಳ್ಳೆಯದು ಎಂದು ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಮನವರಿಕೆ ಮಾಡಿದ್ದಾರೆ ಎಂದು ದೇವೇಗೌಡರು ಆರೋಪಿಸುವ ಮೂಲಕ ಮಧ್ಯಂತರ ಚುನಾವಣೆಗೆ ಕಾಂಗ್ರೆಸ್  ಮೈತ್ರಿ ಧರ್ಮ ಪಾಲಿಸದೆ ಸರ್ಕಾರ ಪತನವಾಗಲಿದೆ ಎಂದು ಸೂಚ್ಯವಾಗಿ ತಿಳಿಸಿರುವುದು ಈ ಬೆಳವಣಿಗೆಗೆ ಪೂರಕವಾಗಿದೆ.
ಮತ್ತೊಂದೆಡೆ ದೇವೇಗೌಡರು ಜೆಡಿಎಸ್ ಪಕ್ಷ ಸಂಘಟನೆ , ರಾಜ್ಯಾಧ್ಯಕ್ಷರ ನೇಮಕ, ಮಹಿಳಾ ಘಟಕಕ್ಕೆ ಅಧ್ಯಕ್ಷರ ನೇಮಕ, ಪದಾಧಿಕಾರಿಗಳ ನೇಮಕ , ಸೋತ ಅಭ್ಯರ್ಥಿಗಳು ಹಾಗೂ ಪಕ್ಷದ ಮುಖಂಡರ ಸಭೆಗಳನ್ನು ನಿರಂತರವಾಗಿ ನಡೆಸುವ ಮೂಲಕ ಚುನಾವಣೆಗೆ ತಯಾರಿ ಎಂಬ ಸಂದೇಶ ನೀಡುತ್ತಿದ್ದಾರೆ.
SCROLL FOR NEXT