ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ನಿವಾಸದಲ್ಲಿ ನಡೆದ ಮಾತುಕತೆಯಲ್ಲಿ ರಾಹುಲ್ ಗಾಂಧಿ, ಕೆ ಸಿ ವೇಣುಗೋಪಾಲ್ ಮತ್ತು ಡ್ಯಾನಿಶ್ ಆಲಿ
ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮತ್ತು ಸೀಟು ಹಂಚಿಕೆ ಕುರಿತು ಇನ್ನೇನು ಮಾತುಕತೆ ಉಳಿದಿಲ್ಲ. ಆದರೆ ಸೀಟು ಹಂಚಿಕೆ ಕಗ್ಗಂಟು ಇನ್ನಷ್ಟು ಜಟಿಲವಾಗಿದೆ. ಬುಧವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಸುಮಾರು 2 ತಾಸುಗಳ ಕಾಲ ಮಾತುಕತೆ ನಡೆಸಿದರೂ ಫಲಪ್ರದವಾಗಿಲ್ಲ ಎಂದು ತಿಳಿದುಬಂದಿದೆ.
ದೆಹಲಿಯ ಸಫ್ದರ್ಜಂಗ್ ರಸ್ತೆಯಲ್ಲಿನ ತಮ್ಮ ನಿವಾಸಕ್ಕೆ ಭೇಟಿ ಕೊಟ್ಟ ರಾಹುಲ್ಗಾಂಧಿಯನ್ನು ದೇವೇಗೌಡರು ಖುದ್ದು ಸ್ವಾಗತಿಸಿದರಾದರೂ, ಸೀಟು ಹಂಚಿಕೆ ಮಾತುಕತೆ ವೇಳೆ ಬಗ್ಗಲಿಲ್ಲ. ಕಾಂಗ್ರೆಸ್ 9 ಕ್ಷೇತ್ರಗಳನ್ನು ಬಿಟ್ಟು ಕೊಡಲು ಒಪ್ಪಿತು. ಆದ್ರೆ 10 ಕ್ಷೇತ್ರಗಳಿಗೆ ದೇವೇಗೌಡರು ಬಿಗಿಪಟ್ಟು ಹಿಡಿದಿದ್ದರಿಂದ ಮಾತುಕತೆ ವಿಫಲವಾಯ್ತು. ಮೈತ್ರಿ ಸರ್ಕಾರದಲ್ಲಿ ಮಂತ್ರಿ ಸ್ಥಾನ ಹಂಚಿಕೆಗೆ ಪಾಲನೆಯಾಗಿರೋ 3ನೇ 1 ಭಾಗದಂತೆ, ಸೀಟು ಕೂಡ ಹಂಚಿಕೆಯಾಗಲಿ ಎಂದು ದೇವೇಗೌಡರ ಬೇಡಿಕೆ ಇಟ್ಟಿದ್ದಾರೆ. ಚಿಕ್ಕಮಗಳೂರು, ಮೈಸೂರು, ತುಮಕೂರು ಕ್ಷೇತ್ರಗಳ ಸೀಟು ಹಂಚಿಕೆ ವಿಚಾರದಲ್ಲಿ ಒಮ್ಮತಕ್ಕೆ ಬರಲಿಲ್ಲ.
ಮೂರನೇ ಒಂದು ಭಾಗದಷ್ಟು ಸೀಟು ಹಂಚಿಕೆಯಾಗಬೇಕು. ಹೀಗಾಗಿ ಕನಿಷ್ಠ 10 ಲೋಕಸಭಾ ಕ್ಷೇತ್ರ ಬಿಟ್ಟು ಕೊಡಬೇಕು. ರಾಜ್ಯದಲ್ಲಿ ಮೈತ್ರಿಯಾಗಿ ನಾವು ದೇಶಕ್ಕೆ ಸಂದೇಶ ಕಳುಹಿಸಿದ್ದೇವೆ. ಹೀಗಾಗಿ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವುದು ನಮಗೆ ಮುಖ್ಯವಾಗುತ್ತದೆ. ಈ ಕಾರಣಕ್ಕೆ ಹಾಲಿ ಸಂಸದ ಕ್ಷೇತ್ರಗಳನ್ನು ನಮಗೆ ಬಿಟ್ಟುಕೊಡಿ. ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ಬೆಂಗಳೂರು ಉತ್ತರ, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ವಿಜಯಪುರ, ಬೀದರ್ ಕ್ಷೇತ್ರವನ್ನು ನಮಗೆ ಬಿಟ್ಟಕೊಡಿ. ಚಿಕ್ಕಬಳ್ಳಾಪುರದಲ್ಲಿ ಒಕ್ಕಲಿಗರೇ ಅಭ್ಯರ್ಥಿ ಆಗಬೇಕು. ಆ ಕಾರಣಕ್ಕಾಗಿ ಆ ಕೇತ್ರವನ್ನೂ ನಮಗೆ ಬಿಟ್ಟುಕೊಡಿ ಎಂದು ದೇವೇಗೌಡರು ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾಯಕರು ಪ್ರಸ್ತುತ ಇರುವ ರಾಜಕೀಯ ಸ್ಥಿತಿಗತಿ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಸಿದರು ಎನ್ನಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics