ಬೆಂಗಳೂರು: ಸುಮಲತಾ ಅಂಬರೀಷ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡುವುದರೊಂದಿಗೆ ಮಂಡ್ಯ ಲೋಕಸಭಾ ಕ್ಷೇತ್ರ ಹೈವೋಲ್ಟೇಜ್ ಕಣವಾಗಿ ರೂಪುಗೊಂಡಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ಧೀರ ರಾಕ್ ಲೈನ್ ವೆಂಕಟೇಶ್ ಮತ್ತಿತರ ಚಿತ್ರರಂಗದ ದಿಗ್ಗಜರು ಸುಮಲತಾ ಅಂಬರೀಷ್ ಅವರ ಬೆಂಬಲಕ್ಕಿಳಿದಿದ್ದು, ಮುಂದಿನ ದಿನಗಳಲ್ಲಿ ಈ ಕ್ಷೇತ್ರ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಲಿದೆ.
ಸುಮಲತಾ ಅಂಬರೀಷ್ ಅವರ ಸ್ಪರ್ಧೆ ನಿರ್ಧಾರ ಕುರಿತಂತೆ ಚಿತ್ರರಂಗ ಸೇರಿದಂತೆ ಅಂಬರೀಷ್ ಅಭಿಮಾನಿಗಳಿಂದ ಮೆಚ್ಚುಗೆಯ ಮಾತುಗಳು ಕೇಳಬರುತ್ತಿವೆ.
ದರ್ಶನ್, ಯಶ್ ಅವರಂತೆ ಅಂಬರೀಷ್ ಜೊತೆಗೆ ಉತ್ತಮ ಒಡನಾಟ ಹೊಂದಿದ್ದ ಕಿಚ್ಚ ಸುದೀಪ್ ಕೂಡಾ ಸುಮಲತಾ ಅಂಬರೀಷ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸುಮಲತಾ ಅವರ ರಾಜಕೀಯ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.
ಅಂಬರೀಷ್ ಅವರನ್ನು ತುಂಬಾ ಹತ್ತಿರದಿಂದ ಬಲ್ಲವರಾಗಿದ್ದ ನಿಮಗೆ ಅವರ ಬಲ, ಬೆಂಬಲ ಮಂಡ್ಯದ ಜನರ ಮೂಲಕ ದೊರೆಯುವ ವಿಶ್ವಾಸವಿದೆ. ಮಂಡ್ಯ ಜನರ ಸೇವೆ ಸಲ್ಲಿಸಬೇಕೆಂಬ ನಿಮ್ಮ ಆಸೆ ಕೈಗೊಡಲಿ, ಶುಭವಾಗಲಿ ಎಂದು ಕಿಚ್ಚ ಸುದೀಪ್ ಟ್ವಿಟರ್ ನಲ್ಲಿ ಸಂದೇಶ ಹಾಕಿದ್ದಾರೆ.
ಸುಮಲತಾ ಅಂಬರೀಷ್ ಚುನಾವಣೆಗೆ ಸ್ಪರ್ಧಿಸುವ ವಿಷಯವನ್ನು ನಿನ್ನೆ ಪ್ರಕಟಿಸಿದಾಗ ದರ್ಶನ್, ಯಶ್ ಸುಮಲತಾ ಅವರ ಜೊತೆಯಲ್ಲಿಯೇ ಇದ್ದರು. ಆದರೆ, ಸುದೀಪ್ ಚಿತ್ರವೊಂದರಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರಿಂದ ಅವರು ಪಾಲ್ಗೊಂಡಿಲ್ಲ ಎಂದು ತಿಳಿದುಬಂದಿತ್ತು. ಈಗ ಟ್ವಿಟರ್ ಮೂಲಕ ಶುಭ ಹಾರೈಸಿದ್ದು, ಸುಮಲತಾ ಅವರಿಗೆ ಒಳ್ಳೆಯದಾಗಲೀ ಎಂದು ಹಾರೈಸಿದ್ದಾರೆ..