ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಲೋಕಸಮರಕ್ಕೆ ಕಾಂಗ್ರೆಸ್, ಜೆಡಿಎಸ್ ಒಗ್ಗಟ್ಟಿನ ರಣಕಹಳೆ: ಮಾ.31 ರಂದು ಜಂಟಿ ಸಮಾವೇಶ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎರಡಂಕಿ ದಾಟಲು ಬಿಡುವುದಿಲ್ಲ ಎಂದು ಬಹಿರಂಗವಾಗಿ ಸವಾಲು ಎಸೆದಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು...

ಜಂಟಿ ಸುದ್ದಿಗೋಷ್ಠಿ
Lingaraj Badiger
Updated On : 19 Mar 2019, 6:32 am
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎರಡಂಕಿ ದಾಟಲು ಬಿಡುವುದಿಲ್ಲ ಎಂದು ಬಹಿರಂಗವಾಗಿ ಸವಾಲು ಎಸೆದಿರುವ ಕಾಂಗ್ರೆಸ್-ಜೆಡಿಎಸ್  ನಾಯಕರು, ಒಗ್ಗಟ್ಟಾಗಿ ಚುನಾವಣಾ ಪ್ರಚಾರದ ಕಣಕ್ಕೆ ಧುಮುಕಲು ನಿರ್ಧರಿಸಿದ್ದಾರೆ. ಅಲ್ಲದೆ ಮಾರ್ಚ್ 31 ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಚುನಾವಣಾ ರಣಕಹಳೆ ಮೊಳಗಿಸುವುದಾಗಿ ಘೋಷಿಸಿದ್ದಾರೆ.
ಕ್ಷೇತ್ರ ಹಂಚಿಕೆ, ಸ್ಥಳಿಯ ಮಟ್ಟದಲ್ಲಿನ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಮುನ್ನಡೆಯುವುದಾಗಿ ವಿಶ್ವಾಸ ವ್ಯಕ್ತಪಡಿಸಿರುವ ಮೈತ್ರಿ ಪಕ್ಷಗಳ ಅಗ್ರ ನಾಯಕರು, ಈ ಮಾಸಾಂತ್ಯದ ವೇಳೆಗೆ ಮೈತ್ರಿ ಪಕ್ಷಗಳಲ್ಲಿರುವ ಎಲ್ಲಾ ಬಗೆಯ ಅಸಮಾಧಾನಗಳನ್ನು ಪರಿಹರಿಸಿಕೊಂಡು ಐಕ್ಯತೆಯ ಮಂತ್ರದೊಂದಿಗೆ ಚುನಾವಣೆ ಎದುರಿಸುವುದಾಗಿ ಹೇಳಿದ್ದಾರೆ.
ನಗರದ ಖಾಸಗಿ ಹೊಟೇಲ್‍ನಲ್ಲಿಂದು ಮೈತ್ರಿ ಕೂಟದ ಪ್ರಮುಖ ನಾಯಕರಾದ ಹೆಚ್.ಡಿ.ದೇವೇಗೌಡ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜಂಟಿ  ಸುದ್ದಿಗೋಷ್ಠಿ ನಡೆಸಿ, ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿರುವ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು. ಉಭಯ ಪಕ್ಷಗಳ ಕಾರ್ಯಕರ್ತರು ಸ್ಥಳಿಯ ಮಟ್ಟದಲ್ಲಿ ಒಂದಾಗುವಂತೆ, ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಬಿಜೆಪಿ ವಿರುದ್ಧ ಗೆಲುವು ಸಾಧಿಸಲು ಶ್ರಮಿಸುವಂತೆ ಕರೆ ನೀಡಿದರು.

Advertisement

Advertisement

ಸಿದ್ದರಾಮಯ್ಯ ಮಾತನಾಡಿ,  ಮೈತ್ರಿ ಸರ್ಕಾರ ರಚನೆಯಾಗುವಂತಹ ಸಂದರ್ಭದಲ್ಲಿ ತೆಗೆದುಕೊಂಡ ತೀರ್ಮಾನದಂತೆ ಎರಡೂ ಪಕ್ಷಗಳು ಒಗ್ಗಟ್ಟಾಗಿ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದು, ಮೈತ್ರಿ ನಾಯಕರು ಜಂಟಿಯಾಗಿ ಪ್ರಚಾರ ನಡೆಸಲಿದ್ದಾರೆ ಎಂದರು.
ಜಾತ್ಯಾತೀತ ಮತಗಳ ವಿಭಜನೆಯೇ ಬಿಜೆಪಿಯ ಗೆಲುವಿಗೆ ಕಾರಣವಾಗುತ್ತಿತ್ತು. ಆದರೆ ಈ ಬಾರಿ ಜಾತ್ಯಾತೀತ ಮತಗಳ ಧೃವೀಕರಣವಾಗುತ್ತಿದೆ.  ರಾಜ್ಯದಲ್ಲಿ ಬಿಜೆಪಿಯನ್ನು  ಸೋಲಿಸುವುದೇ ಮೈತ್ರಿ ಪಕ್ಷಗಳ ಗುರಿ. ಕಳೆದ ಬಾರಿ 5 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯನ್ನು ಜಂಟಿಯಾಗಿ ಎದುರಿಸಿ ಗೆಲುವು ಸಾಧಿಸಲಾಗಿದ್ದರೂ ಶಿವಮೊಗ್ಗದಲ್ಲಿ ಕಡಿಮೆ ಅಂತರದಲ್ಲಿ ಸೋಲು ಉಂಟಾಗಿತ್ತು. ಜಮಖಂಡಿ,‌ ರಾಮನಗರ, ಬಳ್ಳಾರಿ, ಮಂಡ್ಯದಲ್ಲಿ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಶಿವಮೊಗ್ಗದಲ್ಲಿ ಇನ್ನೂ ಹೆಚ್ಚಿನ ಪ್ರಯತ್ನ ಮಾಡಿದ್ದರೆ ಗೆಲ್ಲಬಹುದಿತ್ತು ಎಂದರು. 
ಸ್ಥಳೀಯ ಮಟ್ಟದಲ್ಲಿ ಎರಡೂ ಪಕ್ಷದ ಶಾಸಕರು, ಕಾರ್ಯಕರ್ತರು, ಜಿಲ್ಲಾ ಮುಖಂಡರು ಒ‍ಗ್ಗಟ್ಟಾಗುವಂತೆ ಕರೆ ನೀಡಿದ ಸಿದ್ದರಾಮಯ್ಯ, ಎರಡೂ ಪಕ್ಷದ ವತಿಯಿಂದ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಸಣ್ಣಪುಟ್ಟ ಸಮಸ್ಯೆಗಳನ್ನು ಬದಿಗೊತ್ತಿ ಎರಡೂ ಪಕ್ಷಗಳು ಒಂದಾಗಿ ಬಿಜೆಪಿಯನ್ನು ಸೋಲಿಸಲು ಪ್ರಯತ್ನಿಸಬೇಕು. ಜೆಡಿಎಸ್-ಕಾಂಗ್ರೆಸ್ ಪಕ್ಷದಿಂದ ಪ್ರತ್ಯೇಕವಾಗಿ  ಚುನಾವಣಾ ವೀಕ್ಷಕರನ್ನು ನೇಮಿಸಲಾಗುವುದು ಎಂದು ತಿಳಿಸಿದರು.
2-3 ದಿನಗಳಲ್ಲಿ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅಖೈರುಗೊಳ್ಳಲಿದ್ದಾರೆ. ಜಂಟಿಯಾಗಿ ಪ್ರಚಾರ ನಡೆಸುವ ಮೂಲಕ 28 ಕ್ಷೇತ್ರಗಳನ್ನೂ ಗೆಲ್ಲುವ ಗುರಿ ಹೊಂದಲಾಗಿದೆ. ಕೆಲವು ಪ್ರಚಾರ ಸಭೆಯಲ್ಲಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಜಂಟಿಯಾಗಿ ಭಾಗವಹಿಸಲಿದ್ದಾರೆ. 
ಮಾ.31 ರಂದು ಬೆಂಗಳೂರು ಸುತ್ತಮುತ್ತ ಐತಿಹಾಸಿಕ ಸಮಾವೇಶ ನಡೆಸಲಿದ್ದೇವೆ. ಸಮಾವೇಶಕ್ಕೆ ಸ್ಥಳ, ಸಮಯ ನಿಗದಿಯಾಗಬೇಕಿದೆ ಎಂದು ಅವರು ತಿಳಿಸಿದರು. 
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಲೋಕಸಭೆ ಚುನಾವಣೆಗೆ ಮೊದಲ ಹಂತದ ನಾಮಪತ್ರ ಸಲ್ಲಿಕೆಗೆ ಇಂದು ಅಧಿಸೂಚನೆ ಪ್ರಕಟವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಉದ್ದೇಶವೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಾಗಿದೆ. ರಾಜ್ಯದಿಂದ ದೇಶಕ್ಕೆ ಮಹತ್ತರ ಸಂದೇಶ ಸಾರುವ ಚುನಾವಣೆ ಇದಾಗಿದೆ ಎಂದರು.
ಮೈತ್ರಿ ನಾಯಕರು ಒಟ್ಟಾಗಿ ಪ್ರಚಾರಗಳಲ್ಲಿ ತೊಡಗಿಸಿಕೊಳ್ಳುವ ಸಂಬಂಧ ಎರಡು ಪಕ್ಷದ ನಾಯಕರು ಒಟ್ಟಾಗಿ ಕೂತು ಸಭೆ ನಡೆಸಿದ್ದು, ಜಂಟಿ ಕಾರ್ಯಕ್ರಮಗಳು,  ಕಾರ್ಯಕರ್ತರಲ್ಲಿ ಮತದಾರರಿಗೆ ವಿಶ್ವಾಸ ಮೂಡಿಸುವ ಬಗ್ಗೆ ಚರ್ಚಿಸಲಾಗಿದೆ. ಬಿಜೆಪಿಯನ್ನು ಸೋಲಿಸುವ  ಸವಾಲನ್ನು ನಾವು ಸ್ವೀಕರಿಸಿದ್ದೇವೆ ಎಂದರು.
ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಚುನಾವಣೆ ಗೆಲ್ಲಲು ತಂತ್ರ‌ ರೂಪಿಸಲಾಗಿದೆ . ಕ್ಷೇತ್ರ ಹಂಚಿಕೆ ಕುರಿತು ಕೆಲವು ಸಣ್ಣಪುಟ್ಟ ಸಮಸ್ಯೆ ಇರುವುದು ನಿಜ. ಸಮಸ್ಯೆಗಳನ್ನು ಸರಿಪಡಿಸುವಲ್ಲಿ ಸಿದ್ದರಾಮಯ್ಯ, ದೇವೇಗೌಡ ಅವರು ಕಾರ್ಯೋನ್ಮುಖರಾಗಿದ್ದಾರೆ. 
ಮಾ.31 ರಂದು ಐತಿಹಾಸಿಕ ಸಮಾವೇಶ ಮೂಲಕ ದೇಶಕ್ಕೆ ಮಹತ್ತರ ಸಂದೇಶವೊಂದು ರವಾನೆಯಾಗಲಿದೆ. ದೇಶದಲ್ಲಿ ಬದಲಾವಣೆ ಅಗತ್ಯವಿದೆ ಎಂದರು.
ಕಳೆದ 5 ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೈತ್ರಿ ಮೂಲಕ ಬಿಜೆಪಿ ವಿರುದ್ಧ ಗೆಲುವು ಸಾಧಿಸಿದಂತೆ 2019 ರ ಲೋಕಸಭಾ ಚುನಾವಣೆಯಲ್ಲಿಯೂ ಗೆಲುವು ಸಾಧಿಸುವ ಆತ್ಮವಿಶ್ವಾಸ ಮೈತ್ರಿ ನಾಯಕರಲ್ಲಿದೆ.
ಮಾ.31 ರಿಂದ ಜಂಟಿ ಪ್ರಚಾರ ಸಭೆಗಳು ನಡೆಯಲಿವೆ. ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ಎರಡೂ ಪಕ್ಷದಿಂದ ವೀಕ್ಷಕರ‌ನ್ನು ನೇಮಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ‌ ಹೆಚ್.ಡಿ.ದೇವೇಗೌಡ ಮಾತನಾಡಿ,  ಚುನಾವಣಾ ಪ್ರಚಾರ‌ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.  ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಇವರಿಬ್ಬರೂ ಹೇಳಿದಂತೆ ಚುನಾವಣಾ ಕಾರ್ಯತಂತ್ರ ನಡೆಯಲಿದೆ. ಪ್ರಚಾರ ನಡೆಸಲು ಕಾಲಾವಕಾಶ ಕಡಿಮೆಯಿದ್ದು, ಕಡಿಮೆ ಸಮಯದಲ್ಲಿಯೇ ಎರಡು ಪಕ್ಷಗಳು ಒಗ್ಗಟ್ಟಾಗಿ ಬಿಜೆಪಿ ವಿರುದ್ಧ ಸಮರ ಸಾರಬೇಕಿದೆ ಎಂದು  ಕರೆ ನೀಡಿದರು.
ಶಿವಮೊಗ್ಗ, ಮೈಸೂರು ಹೊರತು ಪಡಿಸಿ ಹಳೆ ಮೈಸೂರು ಭಾಗದಲ್ಲಿ ಮೊದಲ ಹಂತದ‌ಲ್ಲಿ ಚುನಾವಣೆ ನಡೆಯಲಿದೆ. ಚುನಾವಣಾ ಸಂಬಂಧ ಮಿತ್ರ ಪಕ್ಷಗಳಲ್ಲಿರುವ ಭಿನ್ನಮತ, ಬಿಕ್ಕಟ್ಟನ್ನು ಸ್ಥಳೀಯ ಹಂತದಲ್ಲಿಯೇ ಸರಿಪಡಿಸಲಾಗುವುದು. ಎರಡೂ ಪಕ್ಷದ ಜಿಲ್ಲಾ ಮುಖಂಡರು, ಶಾಸಕರು ಬಹಿರಂಗವಾಗಿ ಮೈತ್ರಿ ಬಗ್ಗೆ ಅಸಮಾಧಾನ ತೋಡಿಕೊಳ್ಳಬಾರದು. ಮಂಡ್ಯ ಮೈಸೂರಿನಲ್ಲಿರುವ ಸಮಸ್ಯೆಗಳು, ಬಿಕ್ಕಟ್ಟನ್ನು ಇಂದೇ ಸರಿಪಡಿಸಲಾಗುವುದು. ಬಿಕ್ಕಟ್ಟಿನ ಕ್ಷೇತ್ರಗಳಲ್ಲಿ ಸಂಘಟಿತರಾಗಿ ಕೆಲಸ ಮಾಡಿ ಗೆಲುವು ಸಾಧಿಸುತ್ತೇವೆ. ಚುನಾವಣೆ ನಂತರ ರಾಜ್ಯದ ಆಡಳಿತದಲ್ಲಿ ಸಮಸ್ಯೆ ಬಂದರೆ ಅದನ್ನೂ ಸರಿಪಡಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾ.31 ರ ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುತ್ತಿದ್ದು, ಸಮಾವೇಶಕ್ಕೆ ಆಗಮಿಸುವಂತೆ ಕೆಪಿಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಒಪ್ಪಿಸಿದ್ದಾರೆ. ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿಯೇ ಪ್ರಾದೇಶಿಕ ನಾಯಕರು ತೀರ್ಮಾನ ತೆಗೆದುಕೊಳ್ಳುವುದು ಮುಖ್ಯ ಎಂದು ದೇವೇಗೌಡರು ತಿಳಿಸಿದರು.
ಮಹಾಘಟ್ ಬಂಧನ್ ಬಗ್ಗೆ ಪ್ರಧಾನಿ ಮೋದಿ ಬಹಳ ಹಗುರವಾಗಿ ಮಾತನಾಡುತ್ತಾರೆ. ಒಮ್ಮೊಮ್ಮೆ ಮೋದಿ ಅವರ ಮಾತುಗಳು ಪ್ರಚೋದನಾಕಾರಿಯಾಗಿರುತ್ತವೆ. ಬಿಜೆಪಿ 15 ರಾಜ್ಯಗಳಲ್ಲಿ ಮಹಾಘಟ್ ಬಂಧನ್ ನಡೆಸುತ್ತಿರುವುದರ ಬಗ್ಗೆ ಅರಿವಿಲ್ಲದಂತೆ ಮೋದಿ ಮಹಾಘಟ್ ಬಂಧನ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಜಾತ್ಯತೀತ ನಾಯಕರೆಲ್ಲ ಹಾಜರಾಗುವ ಮೂಲಕ ಬಿಜೆಪಿ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದ್ದರು. ಈ ಮೂಲಕ ಇಡೀ ವಿಶ್ವಕ್ಕೆ ರಾಜಕೀಯ ಸಂದೇಶ ರವಾನಿಸಿದ್ದರು ಎಂದರು.
ಸಿದ್ದರಾಮಯ್ಯ ಹಾಗೂ ತಾವು ಜಂಟಿಯಾಗಿ ಚುನಾವಣಾ ಪ್ರಚಾರ ಮಾಡಲಿದ್ದೇವೆ. ಕ್ಷೇತ್ರ ಬದಲಾವಣೆ ಮಾಡುವ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನ  ತೆಗೆದುಕೊಂಡಿಲ್ಲ. ಸಿದ್ದರಾಮಯ್ಯ ಹಾಗೂ ತಾವು ಒಗ್ಗಟ್ಟಾಗಿ ಪ್ರಚಾರ ನಡೆಸಲು ತೀರ್ಮಾನಿಸಿದ ಮೇಲೆ ಸಮಸ್ಯೆ ಪರಿಹಾರವಾಗಿದೆ ಎಂದರ್ಥ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ 10, ಜೆಡಿಎಸ್ 2 ಸ್ಥಾನಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಈಗ ಎರಡೂ ಪಕ್ಷಗಳು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿರುವುದರಿಂದ 28 ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲಲಿದ್ದೇವೆ ಎಂದು ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎರಡು ಅಂಕಿಗಳನ್ನು ಮುಟ್ಟುವುದನ್ನು ತಡೆಯುವುದೇ ಮೈತ್ರಿ ಸರ್ಕಾರದ ಗುರಿ. ಮಾ.31 ರಂದು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಯಾರು ಎಲ್ಲಿ ಯಾವ ಅಭ್ಯರ್ಥಿ ಪರ ಪ್ರಚಾರ ಮಾಡಬೇಕೆಂಬ ಬಗ್ಗೆ ತೀರ್ಮಾನವಾಗಲಿದೆ. ಮೇ.31 ರ ಸಮಾವೇಶ ನಡೆಯುವುದರೊಳಗೆ ಭಿನ್ನಮತ ಸರಿಪಡಿಸಿಕೊಂಡು, ಅಸಮಾಧಾನಗಳಿಗೆ ಇಂದೇ ಇತಿಶ‍್ರೀ ಹಾಡಬೇಕು. ಬಹಿರಂಗವಾಗಿ ಎರಡೂ ಪಕ್ಷದ ಯಾವುದೇ ನಾಯಕರಾಗಲೀ, ಶಾಸಕರಾಗಲೀ ಹೇಳಿಕೆಗಳನ್ನು ಕೊಡಬಾರದು. ಎರಡೂ ಪಕ್ಷದಿಂದ ಒಬ್ಬರೇ ವಕ್ತಾರರನ್ನು ನೇಮಿಸಬೇಕು ಎಂದು ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement