ಬೆಂಗಳೂರು: ಕಳೆದ 38 ವರ್ಷಗಳಿಂದ ಬೆಂಗಳುರು ದಕ್ಷಿಣದಲ್ಲಿ ಕಾಂಗ್ರೆಸ್ ಪಕ್ಷ ಸಂಸದೀಯ ಚುನಾವಣೆ ಗೆದ್ದಿಲ್ಲ, ಈ ಹಿನ್ನೆಲೆಯಲ್ಲಿ ಈ ಬಾರಿ ಲೋಕಸಭೆ ಚುಉನಾವಣೆಗೆ ಬಿಟಿಎಂ ಕ್ಷೇತ್ರದ ಶಾಸಕ ರಾಮಲಿಂಗಾ ರೆಡ್ಡಿಯವರೇನಾದರೂ ಕಾಂಗ್ರೆಸ್ ನಿಂದ ಸ್ಪರ್ಧಿಸಿವ ಇರಾದೆ ಇದೆಯೆ ಎಂದು ಕೇಳಲಾಗಿ ರೆಡ್ಡಿ ಅವರು "ಇಲ್ಲ" ಎಂಬ ಉತ್ತರ ನೀಡಿದ್ದಾರೆ. "ನಾನು ಸಂಸತ್ತಿಗೆ ಹೋಗುವುದಕ್ಕೆ ಬಯಸಲಾರೆ, ನನಗೆ ಅದರಲ್ಲಿ ಆಸಕ್ತಿ ಇಲ್ಲ." ಅವರು ಹೇಳಿದರು.
ಇತಿಹಾಸದ ದಾಖಲೆಗಳನ್ನು ನೋಡುವುದಾದರೆ 1989ರಲ್ಲಿ ಕಾಂಗ್ರೆಸ್ ನ ಆರ್. ಗುಂಡೂರಾವ್ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇ ಕೈ ಪಕ್ಷದ ಈ ಸ್ಥಾನದಲ್ಲಿನ ಕಡೆಯ ಗೆಲುವಾಗಿತ್ತು. ಅಲ್ಲಿಂದೀಚೆಗೆ ಶಾಸಕರಾದ ಎಂ.ಕೃಷ್ಣಪ್ಪ ಮತ್ತು ಕೃಷ್ಣ ಬೈರೇ ಗೌಡ ಅವರುಗಳು ಸಂಸದರಾಗಿದ್ದ ದಿ. ಅನಂತಕುಮಾರ್ ಗೆ ಸ್ಪರ್ಧೆಯೊಡ್ಡಬಹುದಾದ ಹುರಿಯಾಳುಗಳ್ಖು ಎಂದು ಗುರುತಿಸಿಕೊಂಡಿದ್ದರು.
ಪ್ರಸ್ತುತ ಕಾಂಗ್ರೆಸ್ ಪಾಲಿಗೆ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗಳಾರಾದರೂ ಇದ್ದಲ್ಲಿ ಅದು ರೆಡ್ಡಿಯವರು ಮಾತ್ರ ಎಂದು ಹೇಳಲಾಗಿದೆ. ಗೋವಿಂದರಾಜನಗರದ ಪ್ರಿಯಾಕೃಷ್ಣ ಅವರಿಗಿಂತ ರೆಡ್ಡಿ ಉತ್ತಮ ಅಭ್ಯರ್ಥಿ ಎಂಬ ಮಾತುಗಳು ಪಕ್ಷದ ಆಂತರಿಕ ವಲಯದಲ್ಲಿದೆ.. ಆದರೆ ರೆಡ್ಡಿ ತಮಗೆ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸುವ ಆಸಕ್ತಿ ಇಲ್ಲ ಎನ್ನುವ ಮೂಲಕ ತಾವು ಲೋಕ ಕಣಕ್ಕಿಳಿಯುವುದನ್ನು ತಳ್ಳಿ ಹಾಕಿದ್ದಾರೆ.