ಬೆಳಗಾವಿ: ಲೋಕಸಭಾ ಚುನಾವಣೆ ವೇಳೆ ಹಲವೆಡೆ ಮೈತ್ರಿ ಧರ್ಮ ಪಾಲನೆ ಆಗಿಲ್ಲ ,ಮುಂದೆ ಸರಿಪಡಿಸುವ ಕೆಲಸ ಮಾಡಬೇಕಾಗಿದೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ವೇಳೆ ಕೆಲವು ಕ್ಷೇತ್ರಗಳಲ್ಲಿ ಮೈತ್ರಿ ಧರ್ಮ ಪಾಲನೆ ಮಾಡಿಲ್ಲ.ಅಂತಹ ಕ್ಷೇತ್ರಗಳನ್ನ ಗುರುತಿಸಿ ಮುಂದಿನ ದಿನದಲ್ಲಿ ಸರಿಪಡಿಸುವ ಕೆಲಸ ಮಾಡಬೇಕು. ಇದರಿಂದಾಗಿ ಸಮ್ಮಿಶ್ರ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.
ಚಿಂಚೋಳಿ, ಕುಂದಗೋಳ ಉಪ ಚುನಾವಣೆಯಲ್ಲಿ ಗೆಲ್ಲಲು ಅಗತ್ಯ ತಂತ್ರಗಾರಿಕೆ ಮಾಡಲಾಗಿದೆ. ಕುಂದಗೋಳದ ಉಸ್ತುವಾರಿಯನ್ನು ಡಿಕೆ ಶಿವಕುಮಾರ್‌ಗೆ ನೀಡಬಾದರು ಎಂದು ತಾವು ಹೇಳಿಲ್ಲ. ಯಾರೇ ಉಸ್ತುವಾರಿ ಇರಲಿ ಪಕ್ಷದ ಅಭ್ಯರ್ಥಿ ಗೆಲವು ಮುಖ್ಯ. ಶಿವಕುಮಾರ್ ವಿರುದ್ಧ ತಾವು ಎಲ್ಲಿಯೂ ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದರು.
ಕೆಲ ದಿನಗಳಲ್ಲಿ ಹಾಲಿ ಸಚಿವರುಗಳು ಮಾಜಿಗಳಾಗಲಿದ್ದಾರೆ ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಾವು ಎಂದೂ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿಲ್ಲ.ಕಾರಿಗೆ ಕೆಂಪು ಲೈಟು ತೆಗೆದು ತುಂಬಾ ದಿನಗಳು ಕಳೆದಿವೆ. ರಮೇಶನಿಗೆ ಕೆಂಪು ಲೈಟು, ಅಧಿಕಾರದ ಬಗ್ಗೆ ಗೊತ್ತಿಲ್ಲ. ಕುಮಾರಸ್ವಾಮಿ ಅವರು ರಮೇಶ್ ಜಾರಕಿಹೊಳಿ ಅವರೊಂದಿಗೆ ಸಂಧಾನ ನಡೆಸಿದ್ದಾರೆ ಎಂದು ಅವರು ತಿಳಿಸಿದರು.