ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ತಾವು ಲೋಕೋಪಯೋಗಿ ಇಲಾಖೆ ಸಚಿವರಾದ ಬಳಿಕ ಒಂದೇ ಒಂದು ರೂಪಾಯಿಯ ತುಂಡು ಗುತ್ತಿಗೆ ಕಾಮಗಾರಿ ನೀಡಿಲ್ಲ, ಬಿಜೆಪಿ ನಾಯಕರ 1,400 ಕೋಟಿ ರೂ ಕಾಮಗಾರಿ ತುಂಡುಗುತ್ತಿಗೆ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಸ್ಪಷ್ಟಪಡಿಸಿದರು
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ,ಇಲಾಖೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳುವ ಬಿಜೆಪಿ ನಾಯಕರು ದಾಖಲೆ ಸಮೇತ ಕೋರ್ಟ್ ನಲ್ಲಿ ದೂರು ದಾಖಲಿಸಲಿ ಅಥವಾ ಎಸಿಬಿ, ಲೋಕಾಯುಕ್ತದಲ್ಲಿ ದೂರು ದಾಖಲಿಸಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.
2011ರಲ್ಲೇ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮಾಡಲು ಅಂದಿನ ಬಿಜೆಪಿ ಸರ್ಕಾರ ನಿರ್ಧರಿಸಿತ್ತು. ಈ ಸಂಬಂಧ ಗೆಜೆಟ್ ಪ್ರಕಟಣೆಯನ್ನು ಹೊರಡಿಸಲಾಗಿತ್ತು. 2009-11ರಲ್ಲಿ ವಿಶ್ವಬ್ಯಾಂಕ್, ಹುಡ್ಕೋ ಹಾಗೂ ಎಡಿಬಿಯಿಂದ 3000 ಕೋಟಿ ಸಾಲ ಪಡೆದು ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿತ್ತು. 2011 ರಲ್ಲಿ ಟೆಂಡರ್ ಕೂಡ ಆಹ್ವಾನಿಸಲಾಗಿತ್ತು. ರಾಜ್ಯದ 17 ಹೆದ್ದಾರಿಗಳಲ್ಲಿ 7 ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದರು.
ಟೋಲ್ ಹೊರೆ ಹೆಚ್ಚುವ ಹಿನ್ನಲೆಯಲ್ಲಿ ಮೈಸೂರು- ಬೆಂಗಳೂರು ನಡುವೆ ಆರು ಪಥ ರಸ್ತೆ ನಿರ್ಮಿಸುವಾಗ ಸೇವಾ(ಸರ್ವೀಸ್) ರಸ್ತೆಯನ್ನೂ ನಿರ್ಮಿಸಲಾಗುತ್ತಿದೆ. ಸರ್ವೀಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಹಾಗೂ ಸ್ಥಳೀಯರಿಗೆ ಟೋಲ್ ವಿಧಿಸುವುದಿಲ್ಲ ಎಂದು ಅವರು ತಿಳಿಸಿದರು.
ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆ ಎಂಬ ಮಾತು ಬರೀ ಊಹಾಪೋಹ ಅಷ್ಟೇ.ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿ ತಾವಿಲ್ಲ. ರೇಸ್ ನಲ್ಲಿ ಇರೋದಕ್ಕೆ ತಮ್ಮ ಬಳಿ ಯಾವುದೇ ಕುದುರೆ ಇಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ತಮಗೆ ಲೋಕೋಪಯೋಗಿ ಇಲಾಖೆ ಜವಾಬ್ದಾರಿ ಕೊಟ್ಟಿದ್ದಾರೆ. ಅದನ್ನು ಸಮರ್ಪಕವಾಗಿ ನಿರ್ವಹಿಸುತ್ತೇನೆ. ಅದು ಬಿಟ್ಟು ಬೇರೆ ಯಾವುದೇ ವಿಷಯದ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬದಲಾವಣೆ ಅಸಾಧ್ಯ ಎಂದರು.
ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆ ವೇಳೆ ಏಪ್ರಿಲ್ 17ರ ವರಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಚುನಾವಣಾಧಿಕಾರಿಗಳು ಪ್ರಮಾಣಪತ್ರ ಕೊಟ್ಟಿದ್ದಾರೆ. ಆದರೆ 27ರಂದು ಯಾರೋ ದೂರು ನೀಡಿದ್ದಾರೆ ಎಂದು ಅನಾವಶ್ಯಕವಾಗಿ ಆರೋಪಿಸಿದ್ದಾರೆ. ಚುನಾವಣೆ ವೇಳೆ ಅಕ್ರಮ ನಡೆದಿದ್ದರೆ ಮತದಾನದ ದಿನವೇ ಯಾಕೆ ದೂರು ನೀಡಲಿಲ್ಲ. ಯಾರದೋ ಮಗು ಅಳುತ್ತಿತ್ತು ಎಂದು ಮಗುವಿನ ಬೆರಳಿಗೆ ಶಾಯಿ ಹಾಕಿದ್ದಾರೆ. ಆ ಮಗುವನ್ನು ರೇವಣ್ಣನ ಮೊಮ್ಮಗ ಎನ್ನುತ್ತಾರೆ. ತಮ್ಮ ಮಗ ಡಾ.ಸೂರಜ್ ಗೆ ಮಕ್ಕಳೇ ಇಲ್ಲ .ತಮ್ಮ ಕುಟುಂಬದ 20 ಜನರೂ ಒಟ್ಟಿಗೆ ಹೋಗಿ, ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ರೇವಣ್ಣ, ಹಾಸನ, ತುಮಕೂರು,ಮಂಡ್ಯ (ಹೆಚ್ ಎಂಟಿ) ಕ್ಷೇತ್ರಗಳನ್ನು ಸ್ಮರಿಸದೇ ಇದ್ದರೆ ಬಿಜೆಪಿ ನಾಯಕರಿಗೆ ತಿಂದ ಊಟ ಅರಗುವುದಿಲ್ಲ , ನಿದ್ರೆ ಬರುವುದಿಲ್ಲ. ಇದುವರೆಗೆ ಬಿಜೆಪಿ ನಾಯಕರು ರಾಮನ ಭಜನೆ ಮಾಡುತ್ತಿದ್ದರು, ಈಗ ದೇವೇಗೌಡರ ಕುಟುಂಬದ ಭಜನೆ ಮಾಡುತ್ತಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಗೆದ್ದು ತಮ್ಮ ಕುಟುಂಬ ಸದಸ್ಯರು ದೆಹಲಿಗೆ ತೆರಳುವುದು ನಿಶ್ಚಿತ ಎಂದರು.
ಲೋಕಸಭಾ ಚುನಾವಣೆಗೆ ಎಂಜಿನಿಯರ್ ಗಳಿಂದ ಹಣ ಸಂಗ್ರಹ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ರೇವಣ್ಣ, ರಾಜಕಾರಣದಲ್ಲಿ ತಾವು ಅಷ್ಟು ಕೆಳಮಟ್ಟಕ್ಕೆ ಇಳಿದಿಲ್ಲ. ಹುಬ್ಬಳ್ಳಿ ವಿಭಾಗಕ್ಕೆ ಯಡಿಯೂರಪ್ಪ ಅವರ ಅಳಿಯನೇ ಎಕ್ಸಿಕ್ಯೂಟೀವ್ ಇಂಜಿನಿಯರ್. ನಮಗೆ ಎಷ್ಟು ಹಣ ಕೊಟ್ಟಿದ್ದಾರೆ ಎಂದು ಅವರ ಅಳಿಯನೇ ಹೇಳಲಿ ಎಂದು ತಿರುಗೇಟು ನೀಡಿದರು.
ರಾಜೀವ್ ಗಾಂಧಿ ವಿರುದ್ದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮ ಬಗ್ಗೆ ಸಮರ್ಥನೆ ಮಾಡಿಕೊಳ್ಳಲು ರಾಜೀವ್ ಗಾಂಧಿ ನಮ್ಮ ಕಣ್ಣಮುಂದೆ ಇಲ್ಲ. ಅವರ ಬಗ್ಗೆ ಮೋದಿಯವರು ಭ್ರಷ್ಟಾಚಾರದ ಆರೋಪ ಮಾಡಿದ್ದು ಸರಿಯಲ್ಲ.ಈ ರಾಜ್ಯಕ್ಕೆ ರಾಜೀವ್ ಗಾಂಧಿಯವರ ಬಹುದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಆ ಕೊಡುಗೆ ಏನು ಎಂಬುದು ರಾಹುಲ್ ಗಾಂಧಿ ಮತ್ತು ದೇವೇಗೌಡರಿಗೆ ಮಾತ್ರ ಗೊತ್ತು. ಸಮಯ ಬಂದಾಗ ಆ ರಹಸ್ಯ ಏನೆಂಬುದನ್ನು ಬಹಿರಂಗಪಡಿಸುತ್ತೇನೆ ಎಂದು ರೇವಣ್ಣ ತಿಳಿಸಿದರು.
ಮೇ 23 ರ ನಂತರ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಪತನವಾಗುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಏಳಕ್ಕೆ ಏಳೂ ಸ್ಥಾನ ಗೆದ್ದರೆ ಆಶ್ಚರ್ಯವಿಲ್ಲ. ಯಡಿಯೂರಪ್ಪ ತಿರುಪತಿಗೆ ಹೋಗಿದ್ದರು. ಈಗ ಜಗದೀಶ್ ಶೆಟ್ಟರ್ ಗೂ ಯಾವುದಾದರೂ ದೇವಸ್ಥಾನಕ್ಕೆ ಹೋಗಲು ಹೇಳಿ ಎಂದು ಬಿಜೆಪಿ ನಾಯಕರ ವಿರುದ್ದ ಎಚ್.ಡಿ.ರೇವಣ್ಣ ವ್ಯಂಗ್ಯವಾಡಿದರು.
ಚಿಕ್ಕಮಗಳೂರಿನ ಕೊಪ್ಪದ ಕುಡಿನೆಲ್ಲಿ ಉಮಾಮಹೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮ ಕುಟುಂಬ ಚಿಕ್ಕಮಗಳೂರಿಗೆ ಹೋಗಿದ್ದು ಪೂಜೆ ಮಾಡಿಸಲು ಅಲ್ಲ. ಬದಲಿಗೆ ಪಿಂಡ ಪ್ರಧಾನದ ಶ್ರಾದ್ಧ ಕರ್ಮ ಮಾಡಿಸಲು ಹೋಗಿದ್ದೆವು.
ದೇವೇಗೌಡರ ತಂದೆಯ ಮೊದಲ ಪತ್ನಿ ಮತ್ತು ಮೂವರು ಮಕ್ಕಳು ಪ್ಲೇಗ್ ರೋಗಕ್ಕೆ ತುತ್ತಾಗಿ ಅಕಾಲಿಕ ಮೃತಪಟ್ಟಿದ್ದರು. ಅವರ ಆತ್ಮಗಳಿಗೆ ಸದ್ಗತಿ ಆಗಬೇಕೆಂದು ಜ್ಯೋತಿಷಿಗಳು ಸಲಹೆ ಮಾಡಿದ ಹಿನ್ನೆಲೆಯಲ್ಲಿ ತಮ್ಮ ತಂದೆಯವರು ಚಿಕ್ಕಮಗಳೂರಿನ ಕಾಪು ಬಳಿ ಶ್ರಾದ್ದ ಕರ್ಮ ನೆರವೇರಿಸಿದ್ದಾರೆ. ಇದು ನಿಖಿಲ್ ಅಥವಾ ಪ್ರಜ್ವಲ್ ಗೆಲುವಿಗೆ ಮಾಡಿಸಿದ ಪೂಜೆಯಲ್ಲ. ಶ್ರಾದ್ದಕರ್ಮ ಪೂಜೆಯಲ್ಲಿ ನಿಖಿಲ್ ಮತ್ತು ಪ್ರಜ್ವಲ್ ಮತ್ತು ತಮ್ಮ ಪತ್ನಿಯರು ಭಾಗಿಯಾಗಿರಲಿಲ್ಲ ಎಂದು ರೇವಣ್ಣ ತಿಳಿಸಿದರು.