ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಹೆಚ್.ಡಿ. ಕುಮಾರಸ್ವಾಮಿ ಇರುವ ಕಾರಣ, ಈಗ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಅಪ್ರಸ್ತುತವಾಗಿದೆ ಎನ್ನುವ ಮೂಲಕ ಮೈತ್ರಿ ಪಕ್ಷಗಳ ನಡುವಣ ವಾಕ್ಸಮರಕ್ಕೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟ್ವೀಟ್ ನಲ್ಲಿ ಅಂತ್ಯ ಹೇಳುವ ಮೂಲಕ ಶಾಂತಿ ಬಾವುಟ ಹಾರಿಸಿದ್ದಾರೆ.
ಸಭೆ ಸಮಾರಂಭಗಳಲ್ಲಿ ಜನರು “ನೀವೇ ನಮ್ಮ ಮುಂದಿನ ಮುಖ್ಯಮಂತ್ರಿ” ಎಂದು ಕೂಗುತ್ತಾರೆ, ಆಗ ‘ಮತ್ತೆ ನಮ್ಮ ಪಕ್ಷಕ್ಕೆ ತಾವೆಲ್ಲ ಬಹುಮತ ನೀಡಿದರೆ ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ’ ಎಂದು ಅವರಿಗೆ ಹೇಳಿದ್ದೇನೆ. ಅಭಿಮಾನದಿಂದ ಜನರು ಮುಖ್ಯಮಂತ್ರಿಯಾಗಿ ಎಂದು ಹೇಳಿದಾಗ ಅವರ ಬಾಯಿ ಮುಚ್ಚಿಸಲಾಗುತ್ತದೆಯೇ? ಎಂದು ಟೀಕಕಾರನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿಗೆ 104 ಸೀಟು ಬಂದಾಗ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ, ನಂತರ ಮೂರೇ ದಿನಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಷ್ಟಾದರೂ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಅವರು ಹಲವು ಬಾರಿ ಹೇಳಿದ್ದಾರೆ. ಈಗೀಗ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತೇನೆ ಎಂದ ತಕ್ಷಣ ಜನರು ನಗಲು ಆರಂಭಿಸುತ್ತಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
“ನನ್ನ ಯಾವ ಕಾರ್ಯಕ್ರಮವೂ ಜನಪ್ರಿಯ ಇಲ್ಲವೇ ತಾತ್ಕಾಲಿಕ ಅಲ್ಲ. ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿಭಾಗ್ಯ, ಪಶುಭಾಗ್ಯ... ಇವುಗಳನ್ನು ಯಾವುದೇ ಸರ್ಕಾರ ನಿಲ್ಲಿಸಲಿ ನೋಡೋಣ” ಎಂದು ಸವಾಲು ಎಸೆದಿರುವ ಮಾಜಿ ಮುಖ್ಯಮಂತ್ರಿ, “ಜಾಗೃತ ಮತದಾರರು ಇರುವವರೆಗೆ ಇವೆಲ್ಲ ಶಾಶ್ವತ ಕಾರ್ಯಕ್ರಮಗಳು, ಟೀಕಾಕಾರರಿಗೆ ನೆನಪಿರಲಿ” ಎಂದು ಎಚ್ಚರಿಕೆ ನೀಡಿದ್ದಾರೆ.
ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರು ಇತ್ತೀಚೆಗೆ ತಮ್ಮ ವಿರುದ್ಧ ಮಾತನಾಡಿಲ್ಲ ನಿಜ. ಆದರೆ ಮೈಸೂರಲ್ಲಿ ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆಂಬ ಅವರ ಹೇಳಿಕೆ ಸತ್ಯವಾಗಿದ್ದರೂ ಅನಗತ್ಯವಾಗಿತ್ತು. ಇದರಿಂದಾಗಿ ಕೆರಳಿದ ನಮ್ಮ ಕಾರ್ಯಕರ್ತರು ಜೆಡಿಎಸ್ ವಿರುದ್ಧ ಮಾತನಾಡತೊಡಗಿದ್ದರು. ಮೈತ್ರಿಕೂಟದಲ್ಲಿ ಇಂತಹದನ್ನು ಮಾಡಬಾರದು ಎಂದು ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos