ಬೆಂಗಳೂರು: ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ನಡುವಿನ ಪ್ರತಿಷ್ಠೆಯ ಕಣವಾಗಿರುವ ರಾಜ್ಯದ ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಶುಕ್ರವಾರ ಸಂಜೆ ತೆರೆ ಬಿದ್ದಿದೆ.
ಬಹಿರಂಗ ಪ್ರಚಾರ ಅವಧಿಯ ಬಳಿಕ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿರುವ ವಿವಿಧ ಕ್ಷೇತ್ರಗಳ ರಾಜಕೀಯ ಮುಖಂಡರು, ಕಾರ್ಯಕರ್ತರು, ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರದಿಂದ ನಿಗರ್ಮಿಸುವಂತೆ ಕುಂದಗೋಳ ಚುನಾವಣಾಧಿಕಾರಿ ವಿ. ಪ್ರಸನ್ನ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಾಳೆ ಮತ್ತು ನಾಡಿದ್ದು ಮುದ್ರಣ ಮಾಧ್ಯಮದಲ್ಲಿ ಚುನಾವಣೆಗೆ ಸಂಬಂಧಿಸಿದ ಯಾವುದೇ ಜಾಹೀರಾತು ಪ್ರಕಟಣೆ ಮಾಡಬೇಕಾದಲ್ಲಿ, ಅದಕ್ಕೆ ಎಂ.ಸಿ.ಎಂ.ಸಿ. ಅನುಮತಿ ಕಡ್ಡಾಯ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವ ಡಿ.ಕೆ.ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿಗಳಾದ ಆರ್. ಅಶೋಕ್ ಹಾಗೂ ಕೆ.ಎಸ್. ಈಶ್ವರಪ್ಪ, ಸ್ಥಳೀಯ ನಾಯಕರು ಸೇರಿದಂತೆ ಹಲವು ರಾಜಕೀಯ ದಿಗ್ಗಜರು ಈ ಎರಡೂ ಕ್ಷೇತ್ರಗಳಲ್ಲಿ ಭಾರಿ ಪ್ರಚಾರ ನಡೆಸಿದ್ದರು.
ಚಿಂಚೋಳಿಯಲ್ಲಿ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಡಾ.ಉಮೇಶ್ ಜಾಧವ್ ಪುತ್ರ ಡಾ. ಅವಿನಾಶ್ ಜಾಧವ್ ಹಾಗೂ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಕೂಟದ ಸುಭಾಷ್ ರಾಥೋಡ್ ಕಣದಲ್ಲಿದ್ದಾರೆ.
ಕುಂದಗೋಳದಲ್ಲಿ ಕಾಂಗ್ರೆಸ್ ನ ಇತ್ತೀಚೆಗೆ ನಿಧನರಾದ ಸಿ.ಎಸ್. ಶಿವಳ್ಳಿ ಅವರ ಪತ್ನಿ ಕುಸುಮ ಶಿವಳ್ಳಿ ಹಾಗೂ ಬಿಜೆಪಿಯ ಚಿಕ್ಕನಗೌಡರ ಸ್ಪರ್ಧಿಸಿದ್ದಾರೆ. ಚಿಂಚೋಳಿಯಲ್ಲಿ 17 ಹಾಗೂ ಕುಂದಗೋಳದಲ್ಲಿ 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಚಿಂಚೋಳಿ ಕ್ಷೇತ್ರದಲ್ಲಿ 99047 ಪುರುಷರು, 94806 ಮಹಿಳೆಯರು ಹಾಗೂ 16 ತೃತೀಯ ಲಿಂಗಿಗಳು ಸೇರಿ 1.93 ಲಕ್ಷ ಮತದಾರರಿದ್ದರೆ, ಕುಂದಗೋಳದಲ್ಲಿ 97501 ಪುರುಷರು, 91938 ಪುರುಷರು ಹಾಗೂ 5 ತೃತೀಯ ಲಿಂಗಿಗಳು ಸೇರಿ 1.89 ಲಕ್ಷ ಮತದಾನಕ್ಕೆ ಅರ್ಹತೆ ಹೊಂದಿದ್ದಾರೆ. ಎರಡೂ ಕ್ಷೇತ್ರಗಳಿಂದ ಒಟ್ಟು 3.83 ಲಕ್ಷ ಸಾಮಾನ್ಯ ಹಾಗೂ 138 ಸೇವಾ ಮತದಾರರಿದ್ದು, ಇವರಲ್ಲಿ 7908 ಹೊಸ ಹಾಗೂ 19,887 ಯುವ ಹಾಗೂ 4340 ದಿವ್ಯಾಂಗ ಮತದಾರರಿದ್ದಾರೆ.
ಚಿಂಚೋಳಿಯಲ್ಲಿ 241 ಹಾಗೂ ಕುಂದಗೋಳದಲ್ಲಿ 214 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಎರಡೂ ಕ್ಷೇತ್ರಗಳಲ್ಲಿ ತಲಾ 2 ಸಖಿ ಹಾಗೂ 1 ದಿವ್ಯಾಂಗರೆ ನಿರ್ವಹಿಸುವ ಮತಗಟ್ಟೆಗಳಿವೆ.
ಚುನಾವಣಾ ಕರ್ತವ್ಯಕ್ಕೆ 968 ಅಧಿಕಾರಿ, ಸಿಬ್ಬಂದಿಯನ್ನು 242 ತಂಡಗಳಾಗಿ ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆಗೆ ಒಂದರಂತೆ ಕಂಟ್ರೋಲ್ ಯುನಿಟ್, ಬ್ಯಾಲೆಟ್ ಹಾಗೂ ವಿವಿಪ್ಯಾಟ್ ಗಳನ್ನು ಒದಗಿಸಲಾಗುವುದು ಎಂದು ಚುನಾವಣಾ ಅಯೋಗ ತಿಳಿಸಿದೆ.
ರಾಜಕೀಯ ಮೇಲಾಟಗಳಿಗೆ ಸಾಕ್ಷಿಯಾಗಿರುವ ಚಿಂಚೋಳಿಯಲ್ಲಿ 60 ಹಾಗೂ ಕುಂದಗೋಳದಲ್ಲಿ 25 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಕೇಂದ್ರೀಯ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿದೆ. ಕೆಲ ಪ್ರದೇಶಗಳಲ್ಲಿ ನಿಷೇಧಾಜ್ಞೆಯನ್ನೂ ಜಾರಿಗೊಳಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos