ರಾಜಕೀಯ

ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣೆ: ಕೈ ಮೇಲುಗೈ, ಬಿಜೆಪಿ, ಜೆಡಿಎಸ್ ಗೆ ಹಿನ್ನಡೆ

Nagaraja AB

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಜನ ಬೆಂಬಲ ಗಳಿಸಿದ್ದ ಬಿಜೆಪಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಗ್ಗರಿಸಿದೆ. ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಜೆಡಿಎಸ್  ಅಸ್ತಿತ್ವಕ್ಕಾಗಿ ತಿಣುಕಾಡುವಂತಾಗಿದೆ.

ರಾಜ್ಯದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ 63 ನಗರ ಸ್ಥಳೀಯ ಸಂಸ್ಥೆಗಳ  1221 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 509, ಬಿಜೆಪಿ 365, ಜೆಡಿಎಸ್ 174 ಹಾಗೂ ಪಕ್ಷೇತರರು 172 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ವಿದ್ಧರೂ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಸ್ವತಂತ್ರವಾಗಿ ಎದುರಿಸಿದ ಅಗ್ನಿ ಪರೀಕ್ಷೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಕಡೆಗಳಲ್ಲಿ ಗೆಲುವು ಸಾಧಿಸಿದ್ದಾರೆ.

ನಗರಸಭೆಯ 217 ವಾರ್ಡ್ ಗಳ ಪೈಕಿ ಕಾಂಗ್ರೆಸ್ 90, ಬಿಜೆಪಿ 56, ಜೆಡಿಎಸ್ 38 ಹಾಗೂ ಪಕ್ಷೇತರರು 33 ಸ್ಥಾನಗಳಲ್ಲಿ ವಿಜಯಿಗಳಾಗಿದ್ದಾರೆ. ಇನ್ನು ಪುರಸಭೆಯ 714 ವಾರ್ಡ್ ಗಳ ಪೈಕಿ ಕಾಂಗ್ರೆಸ್ 322, ಬಿಜೆಪಿ 184 ಜೆಡಿಎಸ್ 102, ಪಕ್ಷೇತರರು 107 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಪಟ್ಟಣ ಪಂಚಾಯಿತಿಯ 290 ಸ್ಥಾನಗಳ ಪೈಕಿ ಬಿಜೆಪಿ 126, ಕಾಂಗ್ರೆಸ್ 97, ಜೆಡಿಎಸ್ 34 ಹಾಗೂ ಪಕ್ಷೇತರರು 33 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪುರಸಭೆಯ 23 ವಾರ್ಡ್ ಗಳ ಪೈಕಿ ಕಾಂಗ್ರೆಸ್ 8, ಜೆಡಿಎಸ್ 11 ಹಾಗೂ ಪಕ್ಷೇತರರು 4 ಗೆಲುವು ಸಾಧಿಸುವ ಮೂಲಕ ಜೆಡಿಎಸ್ ಅಧಿಕಾರದ ಗುದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಬಂಗಾರಪೇಟೆ ಪುರಸಭೆಯ 27 ವಾರ್ಡ್ ಗಳ ಪೈಕಿ ಕಾಂಗ್ರೆಸ್ 20, ಜೆಡಿಎಸ್ 2, ಬಿಜೆಪಿ 1, ಪಕ್ಷೇತರ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಯಶಸ್ಸು ಕಂಡಿದೆ. ಮಾಲೂರು ಪುರಸಭೆ 27 ವಾರ್ಡ್ ಗಳ ಪೈಕಿ ಕಾಂಗ್ರೆಸ್ 11, ಜೆಡಿಎಸ್ 1, ಬಿಜೆಪಿ 10 ಹಾಗೂ ಪಕ್ಷೇತರರು 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಆತಂತ್ರ ಸ್ಥಿತಿ ನಿರ್ಮಾಣವಾಗಿದೆ. ಕುಣಿಗಲ್ ಪುರಸಭೆ ಕಾಂಗ್ರೆಸ್ ವಶವಾಗಿದ್ದರೆ, ತಿಪಟೂರು ನಗರಸಭೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಬಳ್ಳಾರಿ ಜಿಲ್ಲೆಯ ಹಡಗಲಿ ಪುರಸಭೆ ಕಾಂಗ್ರೆಸ್ ಪಾಲಾಗಿದೆ.
ಕಮಲಾಪುರ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಗದ್ದುಗೆ ಮರಳಿ ಹಿಡಿದಿದೆ. ಸಂಡೂರು ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದ್ದು, ಹರಿಹರ ನಗರಸಭೆಯಲ್ಲಿ ಜೆಡಿಎಸ್ ಗೆಲುವಿನ ನಗೆ ಬೀರಿದೆ. ತುರುವೇಕೆರೆ ಪಟ್ಟಣ ಪಂಚಾಯಿತಿಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿದೆ.
ಈ ಮಧ್ಯೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎರಡು ವಾರ್ಡ್ ಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದು ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.
SCROLL FOR NEXT