ರಾಜಕೀಯ

ತರಾತುರಿ ನಿರ್ಧಾರ ಬೇಡ, 2020ರವರೆಗೂ ಕಾದುನೋಡಿ: ಬೇಸತ್ತ ಜೆಡಿಎಸ್ ಶಾಸಕರಿಗೆ ದೇವೇಗೌಡ

Manjula VN

ಬೆಂಗಳೂರು: ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ. 2020ರವರೆಗೂ ಕಾದುನೋಡಿ ಎಂದು ಕುಟುಂಬ ರಾಜಕೀಯದಿಂದಾಗಿ ಬೇಸತ್ತು ಪಕ್ಷ ತೊರೆಯಲು ನಿರ್ಧರಿಸಿರುವ ಜೆಡಿಎಸ್ ಶಾಸಕರಿಗೆ ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರು ಹೇಳಿದ್ದಾರೆ. 

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ನಡೆಸುತ್ತಿರುವ ಕುಟುಂಬ ರಾಜಕೀಯದಿಂದ ಬೇಸತ್ತಿರುವ ಕೆಲ ಜೆಡಿಎಸ್ ಶಾಸಕರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಈಗಾಗಲೇ ಮೂವರು ಶಾಸಕರು ಪಕ್ಷ ತೊರೆದಿದ್ದು, ಮತ್ತಷ್ಟು ಶಾಸಕರು ಪಕ್ಷಕ್ಕೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ. ಈ ನಡುವೆ. ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಸೇರಿದಂತೆ ಹಲವು ನಾಯಕರು ಪಕ್ಷ ತೊರೆಯುವ ಕುರಿತು ಒಂದರ ಹಿಂದೆ ಒಂದರಂತೆ ಸಭೆಗಳನ್ನು ನಡೆಸುತ್ತಿದ್ದು, ಮಲೇಷಿಯಾ ಪ್ರವಾಸ ತೆರಳಲು ನಿರ್ಧರಿಸಿದ್ದಾರೆ. 

ಈ ಎಲ್ಲಾ ಬೆಳವಣಿಗೆಗಳನ್ನು ಗಮಿನಿಸಿರುವ ದೇವೇಗೌಡ ಅವರು, ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ. 2020ರ ಜನವರಿ ತಿಂಗಳವರೆಗೂ ಕಾದು ನೋಡಿ. ಜೆಡಿಎಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ. ಅಲ್ಲದೆ, ಅಸಮಾಧಾನಗೊಂಡಿರುವ ಶಾಸಕರು ಹಾಗೂ ನಾಯಕರೊಂದಿಗೆ ನವೆಂಬರ್ 6 ರಂದು ಬೆಂಗಳೂರಿನಲ್ಲಿಯೇ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಸಭೆ ಹಿನ್ನಲೆಯಲ್ಲಿ ಶಾಸಕರ ಮೂರು ದಿನಗಳ ಕಾಲ ಮಲೇಷಿಯಾ ಪ್ರವಾಸ ರದ್ದುಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಎಂಎಲ್ಸಿ ಶರವಣ ಅವರು, 5-6 ಮಂದಿ ನಾಯಕರು ದೇವೇಗೌಡ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದೇವೆ. ಮನಸ್ತಾಪಗಳ ಕುರಿತು ದೇವೇಗೌಡ ಅವರಿಗೆ ಮಾಹಿತಿ ಇದೆ. ತಮ್ಮಿಂದ ತಪ್ಪಿರುವುದನ್ನು ಅವರೂ ಒಪ್ಪಿಕೊಂಡಿದ್ದಾರೆ. ಇದರ ಜವಾಬ್ದಾರಿಯನ್ನೂ ಅವರೇ ಹೊತ್ತುಕೊಳ್ಳುವುದಾಗಿಯೂ ತಿಳಿಸಿದ್ದಾರೆಂದು ಹೇಳಿದ್ದಾರೆ. 

ದೇವೇಗೌಡ ಅವರಿಂದಲ್ಲ ಅವರ ಪುತ್ರರಿಂದ ಮನಸ್ತಾಪ ಎದುರಾಗಿದೆ ಎಂಬುದನ್ನು ನಾವು ತಿಳಿಸಿದ್ದೇವೆ. ನವೆಂಬರ್ 6 ರಂದು ಬೆಂಗಳೂರಿನಲ್ಲಿ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಮಲೇಷಿಯಾಗೆ ತೆರಳುತ್ತಿರುವ ಶಾಸಕರ ಪರ ನಾನಿಲ್ಲ ಎಂದು ತಿಳಿಸಿದ್ದಾರೆ. 

ಉಪ ಚುನಾವಣೆಯಿಂದ ಎದುರಾಗುವ ಪರಿಸ್ಥಿತಿಗಳು ನಮಗೆ ತಿಳಿದಿಲ್ಲ. ಉಪ ಚುನಾವಣೆಗೂ ಮುನ್ನ ಸುಪ್ರೀಂಕೋರ್ಟ್ ಆದೇಶ ಹೊರಬೀಳಲಿದೆ. ಸುಪ್ರೀಂಕೋರ್ಟ್ ಆದೇಶಕ್ಕೆ ಕಾಯಬೇಕಿದೆ. ಡಿಸೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆದಿದ್ದೇ ಆದರೆ, ಬಿಜೆಪಿಗೆ ಬಹುಮತ ಸಿಗುವುದಿಲ್ಲ. ಮತ್ತಷ್ಟು ಸಂಖ್ಯೆ ಬಿಜೆಪಿಗೆ ಅಗತ್ಯವಿದೆ. ಇದಕ್ಕೆ ಜೆಡಿಎಸ್ ಸಹಾಯ ಮಾಡಬಹುದು. ಕಾಂಗ್ರೆಸ್ ಜೊತೆಗಂತೂ ಜೆಡಿಎಸ್ ಮುಂದೆ ಕೈಜೋಡಿಸುವುದಿಲ್ಲ ಎಂದು ಜೆಡಿಎಸ್ ಮೂಲಗಳು ಮಾಹಿತಿ ನೀಡಿವೆ. 

ಈ ನಡುವೆ ಸಿದ್ದರಾಮಯ್ಯ ಅವರು ಕುಮಾರಸ್ವಾಮಿಯವರ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಇದು ಜೆಡಿಎಸ್ ಮತ್ತಷ್ಟು ಕೆರಳುವಂತೆ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸಲು ಬಿಡುವುದಿಲ್ಲ ಎಂದು ಕುಮಾರಸ್ವಾಮಿಯವರು ಹೇಳುತ್ತಿದ್ದರು. ಇದೀಗ ಸಿದ್ದರಾಮಯ್ಯ ಅವರ ಹೇಳಿಕೆಗಳಿಂದಾಗಿಯೇ ಜೆಡಿಎಸ್ ಬಿಜೆಪಿಯತ್ತ ಮುಖ ಮಾಡುವಂತಾಗಿದೆ. ಸಿದ್ದರಾಮಯ್ಯ ಅವರಿದೆ ದಿಟ್ಟ ಉತ್ತರ ನೀಡಲು ಬಿಜೆಪಿಯ ಬೆಂಬಲ ಅಗತ್ಯವಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. 

SCROLL FOR NEXT