ರಾಜಕೀಯ

ಪಕ್ಷಾಂತರ ನಿಷೇಧ ಕಾಯಿದೆ ಹಿಂಪಡೆಯುವಂತೆ ಪ್ರಧಾನಿ ಮೋದಿಗೆ ಕುಮಾರಸ್ವಾಮಿ ಆಗ್ರಹ

Lingaraj Badiger

ಬೆಂಗಳೂರು: ಸ್ಪೀಕರ್ ಆದೇಶ‌ ಪ್ರಶ್ನಿಸಿ ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿ ಕುರಿತು ಸುಪ್ರಿಂ ಕೋರ್ಟ್ ನೀಡಿರುವ ತೀರ್ಪು‌ ನೀ ಅತ್ತಂತೆ ಮಾಡು‌ ನಾ ಹೊಡೆದಂತೆ ಮಾಡುತ್ತೇನೆ ಎನ್ನುವಂತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ನಾಯಕ ಹೆಚ್‌.ಡಿ.ಕುಮಾರಸ್ವಾಮಿ ಅವರು ತೀರ್ಪಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬುಧವಾರ ಜೆ.ಪಿ.ಭವನದಲ್ಲಿ‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಅನರ್ಹರ ಅರ್ಜಿಯನ್ನು ಎತ್ತಿ ಹಿಡಿದಿದ್ದು, ಮುಂದಿನ‌ ವಿಧಾನಸಭೆವರೆಗೆ ಸ್ಪರ್ಧಿಸಬಾರದೆಂಬ ಸ್ಪೀಕರ್ ಅವರ ಆದೇಶವನ್ನು ಸರಳೀಕರಣಗೊಳಿಸಿದೆ. ಈಗಾಗಲೇ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಯೂ ಆರಂಭವಾಗಿದೆ. ದೇಶದಲ್ಲಿ ಕಾನೂನುಗಳನ್ನು ರೂಪಿಸಲಾಗುತ್ತಿದೆಯೇ ಹೊರತು ಕಾನೂನಿಗೆ ನಿಯಮಗಳಿಗೆ ಬಲತುಂಬುವ ಕೆಲಸ ಆಗುತ್ತಿಲ್ಲ ಎಂದರು.

ನಿಜಕ್ಕೂ ಪಕ್ಷಾಂತರ ನಿಷೇಧ ಕಾನೂನಿನಲ್ಲಿ‌ ಹುರುಳಿದೆಯೇ ಎಂಬ ಪ್ರಶ್ನೆ ಹುಟ್ಟಿದ್ದು, ಪಕ್ಷಾಂತರ ನಿಷೇಧ‌ ಕಾನೂನನ್ನು ರದ್ದುಗೊಳಿಸಬೇಕು. ಪಕ್ಷಾಂತರ ನಿಷೇಧ ಕಾಯಿದೆ ಕಾನೂನು ಇದ್ದು ಸತ್ತಂತಾಗಿದೆ. ಇದು ಬಲವಿಲ್ಲದ ಕಾನೂನು ಎಂಬುದು ಸುಪ್ರೀಂಕೋರ್ಟ್ ತೀರ್ಪಿನಿಂದ ಸ್ಪಷ್ಟವಾಗಿದೆ. ಒಂದು ಚಿಹ್ನೆಯಡಿ ಸ್ಪರ್ಧಿಸಿ ಗೆದ್ದು ನಂತರ ಜನರ ಅಭಿಪ್ರಾಯವನ್ನೂ ಸಂಗ್ರಹಿಸದೇ ಪಕ್ಷದೊಂದಿಗೆ ಚರ್ಚಿಸದೇ ಪಕ್ಷಾಂತರ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಆರ್ಟಿಕಲ್‌ 370 ರದ್ದು ಮಾಡಿ ಹೊಸ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಅದರಂತೆ ಈಗ ಪಕ್ಷಾಂತರ ನಿಷೇಧ ಕಾಯಿದೆ ಹಿಂಪಡೆದು ದಾಖಲೆ ಬರೆಯಲಿ ಎಂದು ಒತ್ತಾಯಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಲು ಸಾಂವಿಧಾನಿಕ ಸಂಸ್ಥೆಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾನು ವಿನಂತಿಸುತ್ತೇನೆ. ಭವಿಷ್ಯದಲ್ಲಿ ಅಂತವುಗಳು ಮತ್ತೆ ಸಂಭವಿಸದಂತೆ ಅವರು ಖಚಿತಪಡಿಸಿಕೊಳ್ಳಬೇಕು. ಕೆಲವು ರಾಜಕೀಯ ನಾಯಕರು ತಮ್ಮ ವೈಯಕ್ತಿಕ ಲಾಭಕ್ಕಾಗಿ ನಮ್ಮ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ತೀರ್ಪಿನ ಬಗ್ಗೆ ನಾನು ಸಂಪೂರ್ಣವಾಗಿ ಸಂತೋಷವಾಗಿಲ್ಲ ಎಂದು ಮಾಜಿ ಸಿಎಂ ಹೇಳಿದ್ದಾರೆ.

SCROLL FOR NEXT