ರಾಜಕೀಯ

ಕ್ಷೇತ್ರದ ಅಭಿವೃದ್ಧಿ ನಮ್ಮ ಗುರಿ: ಬಿಜೆಪಿ ಸೇರ್ಪಡೆಗೊಂಡ ಅನರ್ಹ ಶಾಸಕರು 

Sumana Upadhyaya

ಬೆಂಗಳೂರು: ಡಿಸೆಂಬರ್ 5ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಸುಪ್ರೀಂ ಕೋರ್ಟ್ ನೀಡಿದ ನಂತರ ಹಾದಿ ಸುಗಮ ಮಾಡಿಕೊಂಡಿರುವ 17 ಮಂದಿ ಅನರ್ಹ ಶಾಸಕರಲ್ಲಿ ಗುರುವಾರ 16 ಮಂದಿ ಅನರ್ಹ ಶಾಸಕರು ಬೆಂಗಳೂರಿನಲ್ಲಿ ಬಿಜೆಪಿಗೆ ಸೇರ್ಪಡೆಯಾದರು.


ಇದಕ್ಕೂ ಮುನ್ನ ಬೆಂಗಳೂರಿನಲ್ಲಿರುವ ಕಾಡುಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅನರ್ಹ ಶಾಸಕರು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡರು. 


 ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅನರ್ಹ ಶಾಸಕ ಬಿ.ಸಿ.ಪಾಟೀಲ್, ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ. ಸೋಮವಾರ ಹಿರೇಕೆರೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತೇನೆ. ಬಿಜೆಪಿ ನಾಯಕ ಯು.ಬಿ.ಬಣಕಾರ್ ನನಗೆ ಸಂಪೂರ್ಣ ಸಹಕಾರ ನೀಡಲಿದ್ದಾರೆ. ಪ್ರಚಂಡ ಬಹುಮತದಿಂದ ಜನ ನನ್ನನ್ನು ಆಯ್ಕೆ ಮಾಡುವ ವಿಶ್ವಾಸವಿದೆ ಎಂದರು. 


ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ಉಪಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸುವುದು, ಸೋಲಿಸುವುದು ಕ್ಷೇತ್ರದ ಮತದಾರರೇ ಹೊರತು‌ ಬೇರೆ ನಾಯಕರಲ್ಲ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ನಮ್ಮ ಗುರಿ ಎಂದರು. 


ಮತ್ತೊಬ್ಬ ಅನರ್ಹ ಶಾಸಕ ಡಾ.ಕೆ. ಸುಧಾಕರ್, ಸಿಎಂ ಯಡಿಯೂರಪ್ಪ ಸಾಮಾಜಿಕ ನ್ಯಾಯಕ್ಕೆ ‌ಅನುಗುಣವಾಗಿ ಆಡಳಿತ ‌ಮಾಡುತ್ತಿದ್ದಾರೆ. ದೇಶದ ಅಭಿವೃದ್ದಿಗಾಗಿ ಪ್ರಧಾನಿ ಮೋದಿ ಅವಿರತ ಶ್ರಮಿಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ನಮಗೆ ಎಲ್ಲ ಸಹಕಾರ ನೀಡುವ ವಿಶ್ವಾಸವಿದೆ.ಹೀಗಾಗಿ ಬಿಜೆಪಿ ಸೇರಿದರೆ ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ಕೇಸರಿ ಪಕ್ಷಕ್ಕೆ ಸೇರುತ್ತಿದ್ದೇವೆ ಎಂದರು.

SCROLL FOR NEXT