ರಾಜಕೀಯ

ಭಾರತ ಹಿಂದೂ ರಾಷ್ಟ್ರ ಎಂದು ಕರೆದಿದ್ದರೆ ಮತ್ತೊಂದು ವಿಭಜನೆಯಾಗುತ್ತಿತ್ತು: ಡಾ. ಜಿ. ಪರಮೇಶ್ವರ್

Lingaraj Badiger

ಬೆಂಗಳೂರು: ಭಾರತವನ್ನು ಹಿಂದೂ ರಾಷ್ಟ್ರ ಎಂದು ಕರೆದಿದ್ದರೆ ದೇಶ ಮತ್ತೊಂದು ವಿಭಜನೆಗೆ ದಾರಿಯಾಗುತ್ತಿತ್ತು. ನಮ್ಮ ರಾಷ್ಟ್ರ ನಿರ್ಮಾಪಕರು ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವ ವಿವಿಧತೆಯಲ್ಲಿ ಏಕತೆಯ ತತ್ವಕ್ಕೆ ಪ್ರಮುಖ ಆದ್ಯತೆ ನೀಡಿದರು ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಭಾರತದ ಉಕ್ಕಿನ‌ ಮಹಿಳೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 102ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಿನ ಪರಿಸ್ಥಿತಿಯಲ್ಲಿ ಹಿಂದು ರಾಷ್ಟ್ರ ಕಟ್ಟುತ್ತೇವೆ ಎನ್ನುವ ಮಾತು ಎಷ್ಟರ ಮಟ್ಟಿಗೆ ಸರಿ ಹೊಂದುತ್ತದೆ ಎನ್ನುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಸಂವಿಧಾನ ರಚನೆಕಾರರು ಭಾರತವನ್ನು ಹಿಂದೂ ರಾಷ್ಟ್ರ ಎಂದು ಕರೆಯಲಿಲ್ಲ. ಭಾರತ ಎಂದು ಕರೆದರು. ಆದರೆ ಪಾಕಿಸ್ತಾನವನ್ನು ಮುಸ್ಲಿಂ ರಾಷ್ಟ್ರ ಎಂದು ಕರೆದ್ದಿದ್ದರು ಎಂದರು.

ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಬಡಜನರ ದೇವರು. ಈಗಲೂ ಗ್ರಾಮೀಣ ಪ್ರದೇಶದಲ್ಲಿ ಜನರು ಇಂದಿರಾಗಾಂಧಿ ಹೆಸರು ಹೇಳಿದರೆ ಅಭಿಮಾನದಿಂದ ನೋಡುತ್ತಾರೆ. ರಾಜಕೀಯವಾಗಿ ಎಲ್ಲರಿಗೂ ಅವಕಾಶ ಕಲ್ಪಿಸಿದ ಮಹಾನ್ ನಾಯಕಿ. ತಮ್ಮ ಜವಾಬ್ದಾರಿಯನ್ನು ಇಂದಿರಾ ಗಾಂಧಿ ಅತ್ಯಂತ ಸಮರ್ಥವಾಗಿ ನಿರ್ವಹಿಸಿದರು ಎಂದರು.

ಸಂವಿಧಾನ ಸಮಾನತೆ ನೀಡಿದ್ದು, ಎಲ್ಲರಂತೆ ನಮಗೂ ಹಕ್ಕು ಇದೆ ಎಂಬ ಪರಿಸರ ನಿರ್ಮಾಣ ಮಾಡಿದ್ದರು. ಈಗಿನ ಜನಾಂಗ ಇದನ್ನು ಸ್ಮರಿಸಿಕೊಳ್ಳಬೇಕಿದೆ. ದೇಶದ ಪರಿಸ್ಥಿತಿ ಅವಲೋಕನ ಮಾಡಿಕೊಂಡರೆ ಅರಿವಾಗುತ್ತದೆ. ದೇಶದಲ್ಲಿ ಶೇ.19 ರಷ್ಟು ಅಲ್ಪ ಸಂಖ್ಯಾತರಿದ್ದು, ಅವರಿಗೆ ಅವರ ಧರ್ಮ ಪಾಲಿಸಲು ಸಂವಿಧಾನದಲ್ಲಿ ಅಂಬೇಡ್ಕರ್ ಅವಕಾಶ ಕಲ್ಪಿಸಿದ್ದಾರೆ ಎಂದರು.

SCROLL FOR NEXT