ವಿಶ್ವೇಶ್ವರ ಹೆಗಡೆ ಕಾಗೇರಿ 
ರಾಜಕೀಯ

ಸದನದಲ್ಲಿ ಸಿದ್ದು – ಕಾಗೇರಿ ನಡುವೆ ವಾಕ್ಸಮರ: ಕನಿಷ್ಠ 6 ದಿನ ಅಧಿವೇಶನ ವಿಸ್ತರಣೆಗೆ ಮಾಜಿ ಸಿಎಂ ಪಟ್ಟು 

ವಿಧಾನಸಭೆಯಲ್ಲಿ ಅತಿವೃಷ್ಟಿ ಕುರಿತು ಚರ್ಚೆ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಕೆಲಕಾಲ ಕಾವೇರಿದ ವಾಗ್ವಾದ, ಮಾತಿನ ಚಕಮಕಿ ನಡೆಯಿತು.

ಬೆಂಗಳೂರು: ವಿಧಾನಸಭೆಯಲ್ಲಿ ಅತಿವೃಷ್ಟಿ ಕುರಿತು ಚರ್ಚೆ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಕೆಲಕಾಲ ಕಾವೇರಿದ ವಾಗ್ವಾದ, ಮಾತಿನ ಚಕಮಕಿ ನಡೆಯಿತು.

ಒಂದು ಹಂತದಲ್ಲಿ ಇಬ್ಬರೂ, ಬಹಳ ಉದ್ವೇಗದಲ್ಲಿ ಮಾತನಾಡಿದರು. “ಸಿದ್ದರಾಮಯ್ಯನವರೇ ನಿಮಗೆ ಮಾತನಾಡಲು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಅವಕಾಶ ಮಾಡಿಕೊಡಲಾಗಿದೆ. ನಿಯಮ 69ರ ಪ್ರಕಾರ ಸಮಯ ಸೀಮಿತಗೊಳಿಸುವ ಅಧಿಕಾರ ನನಗಿದೆ. ಆದ್ದರಿಂದ ತಮ್ಮ ಭಾಷಣವನ್ನು ಆದಷ್ಟು ಬೇಗ ಮುಗಿಸಬೇಕು. ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅವಕಾಶ ಮಾಡಿಕೊಡಬೇಕು” ಎಂದು ಹೇಳುತ್ತಿದ್ದಂತೆಯೇ ಕೆರಳಿ ಕೆಂಡವಾದ ಸಿದ್ದರಾಮಯ್ಯ, “ನಾನು ಮಾತು ಮುಗಿಸುವುದಿಲ್ಲ. ನೀವು ಹೇಳಿದಂತೆ, ಕೇಳುವುದಿಲ್ಲ. ಇದೇನು ಸರ್ವಾಧಿಕಾರಿ ಧೋರಣೆಯೇ? ಅಧಿವೇಶನ ಏತಕ್ಕೆ ಕರೆಯುತ್ತೀರಿ? ಈ ಹಿಂದೆ ಆರು ಗಂಟೆ, ಏಳು ಗಂಟೆ ಮಾತನಾಡಿದ ಇತಿಹಾಸ ಸದನದಲ್ಲಿದೆ. ಇದು ನಿಮಗೂ ಗೊತ್ತಿದೆ. ನಾನು ನೀವು ಹೇಳಿದಂತೆ ಕೇಳುವುದಿಲ್ಲ” ಎಂದು ಪಟ್ಟು ಹಿಡಿದಾಗ ಕೆಲಕಾಲ ಕಾಗೇರಿ ಮತ್ತು ಸಿದ್ದರಾಮಯ್ಯ ನಡುವೆ ಬಿರುಸಿನ ವಾಗ್ವಾದ ನಡೆಯಿತು.
ಆ ಸಮಯದಲ್ಲಿ ಆಡಳಿತ ಮತ್ತು ವಿರೋಧಿ ಸದಸ್ಯರು ಸಹ ಎದ್ದು ನಿಂತು ಮಾತನಾಡಿದ್ದರಿಂದ ಸದನ ಕೆಲಕಾಲ ಗದ್ದಲದಗೂಡಾಯಿತು.

ರಾಜ್ಯದ ಅತಿವೃಷ್ಟಿ ಪರಿಸ್ಥಿತಿ ಹಾಗೂ ವಿತ್ತೀಯ ಕಾರ್ಯ ಕಲಾಪಗಳ ಸುದೀರ್ಘ ಚರ್ಚೆಗಾಗಿ ವಿಧಾನಮಂಡಲದ ಕಲಾಪವನ್ನು ಕನಿಷ್ಠ ಆರು ದಿನಗಳವರೆಗೆ ವಿಸ್ತರಿಸಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಅತಿವೃಷ್ಟಿ ಕುರಿತು ಮುಂದುವರಿದ ಚರ್ಚೆಯಲ್ಲಿ  ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೆಂದೂ ಕಾಣದಷ್ಟು ಭೀಕರ ಪ್ರವಾಹ ಉಂಟಾಗಿದೆ. ಲಕ್ಷಾಂತರ ಜನ, ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಸುಮಾರು 20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾಳಾಗಿದೆ. ರೈತರು ಕೂಡ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರ ಸಮಸ್ಯೆಗಳನ್ನು ಸದನದಲ್ಲಿ ವಿಸ್ತಾರವಾಗಿ ಚರ್ಚೆ ಮಾಡಬೇಕು, ಹೀಗಾಗಿ ಅತಿವೃಷ್ಟಿ ಚರ್ಚೆ ಮೂರು ದಿನ ಹಾಗೂ ವಿತ್ತೀಯ ಕಾರ್ಯಕಲಾಗಳ ಚರ್ಚೆಗೆ ಮೂರು ದಿನಗಳ ಕಾಲ ಅವಕಾಶ ಮಾಡಿಕೊಡಲೇಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಇಂದು ಅತಿವೃಷ್ಟಿ ಚರ್ಚೆಯನ್ನು ಮತ್ತು ವಿತ್ತೀಯ ಕಾರ್ಯಕಲಾಪಗಳ ಚರ್ಚೆಯನ್ನು ಮುಗಿಸಬೇಕಾಗಿದೆ. ಇದಕ್ಕೆ ಎಲ್ಲಾ ಸದಸ್ಯರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಿದ್ದರಾಮಯ್ಯ ಜನ ಕಷ್ಟದಲ್ಲಿರುವಾಗ, ಅವರ ಸಮಸ್ಯೆ ಚರ್ಚೆ ಮಾಡದಿದ್ದರೆ ವಿಧಾನಸಭೆಗೆ ಏನು ಬೆಲೆ? ಏನು ಗೌರವ? ಇದೇನು ಸರ್ವಾಧಿಕಾರಿ ಸರ್ಕಾರವೇ? ಬಜೆಟ್ ಪಾಸು ಮಾಡಲು ಇದೇ 30ರವರೆಗೂ ಕಾಲಾವಕಾಶವಿದೆ. ನಾನು ಕೂಡ ಹಣಕಾಸು ಮಂತ್ರಿಯಾಗಿ 13 ಬಜೆಟ್ ಮಂಡಿಸಿದ್ದೇನೆ. ಲೇಖಾನುದಾನ ಪಡೆದುಕೊಂಡಿದ್ದು, ಇದೇ 30ರವರೆಗೂ ಅವಕಾಶವಿದೆ. ಸರ್ಕಾರಕ್ಕೆ ತುರ್ತು ಅವಶ್ಯಕತೆ ಇದ್ದರೆ ಪೂರಕ ಅಂದಾಜಿಗೆ ಈಗಲೇ ಒಪ್ಪಿಗೆ ಕೊಡಲು ನಾವು ತಯಾರಿದ್ದೇವೆ. ಇಂದೇ ಆಗಬೇಕು, ಹೀಗೇ ಆಗಬೇಕು ಎಂದು ಒತ್ತಡ ಹಾಕುವುದು ಸರಿಯಲ್ಲ. ಸರ್ಕಾರ ತನ್ನ ಧೋರಣೆ ಬದಲಾಯಿಸಿಕೊಳ್ಳಬೇಕು ಮತ್ತು ಕಲಾಪವನ್ನು ಕನಿಷ್ಠ ಆರು ದಿನಗಳವರೆಗೆ ವಿಸ್ತರಣೆ ಮಾಡಬೇಕು ಎಂದು ಪದೇ ಪದೇ ಒತ್ತಾಯಿಸಿದರು.

ಇನ್ನು ಬೆಳೆ ಕಳೆದುಕೊಂಡ ರೈತರಿಗೆ ಸರ್ಕಾರ ಇಲ್ಲಿಯವರೆಗೆ ಒಂದೇ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. ಕಬ್ಬು, ಈರುಳ್ಳಿ ಹೆಸರು, ತೊಗರಿ, ಭತ್ತ ಸೇರಿದಂತೆ 20 ಲಕ್ಷ ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಅವರಿಗೆಲ್ಲಾ ಕೂಡಲೇ ಪರಿಹಾರ ಕೊಡಬೇಕು. ಒಂದು ಎಕರೆ ಕಬ್ಬು ಬೆಳೆಯಲು 40 ರಿಂದ 50 ಸಾವಿರ ರೂ ಖರ್ಚು ಬರುತ್ತದೆ. ಎನ್ ಡಿ ಆರ್ ಎಫ್ ನಿಯಮದ ಪ್ರಕಾರ 13,500 ರೂ ಪರಿಹಾರ ಕೊಡುವುದು ಸರಿಯಲ್ಲ. ಕನಿಷ್ಠ ಎಕರೆಗೆ ಒಂದು ಲಕ್ಷ ರೂ ಪರಿಹಾರ ಕೊಡಬೇಕು, ರೈತರು ತಮ್ಮ ಜಮೀನಿನಲ್ಲಿ ಕಟ್ಟಿಕೊಂಡ ಮನೆಗಳು ಬಿದ್ದುಹೋಗಿದೆ. ಅವರಿಗೂ ಹತ್ತು ಲಕ್ಷ ರೂ ಪರಿಹಾರ ಕೊಡಬೇಕು. ಅದೇ ರೀತಿ, ಶಾಲಾ ಮಕ್ಕಳಿಗೆ ಕೂಡಲೇ ಪಠ್ಯಪುಸ್ತಕ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಕೆಲವು ಕಡೆ ರೈತರ ಜಮೀನಿನಲ್ಲಿರುವ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿ ರೈತರು ಸಂಕಟದಲ್ಲಿದ್ದಾರೆ. ಅವರು ಮತ್ತೆ ಭೂಮಿಯನ್ನು ಹದ ಮಾಡಿಕೊಳ್ಳಲು ಸಾಕಷ್ಟು ಖರ್ಚು ಬರುತ್ತದೆ. ಆದ್ದರಿಂದ ಅವರಿಗೂ ಪರಿಹಾರ ಕೊಡಬೇಕು. ಒಟ್ಟಾರೆ ಅತಿವೃಷ್ಟಿ ಪರಿಸ್ಥಿತಿಯಿಂದ ನೊಂದು ಬೆಂದ ಜನರಿಗೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾನವೀಯ ನೆಲಗಟ್ಟಿನಲ್ಲಿ ಸ್ಪಂದನೆ ಮಾಡಿಲ್ಲ ಎಂದು ಸಿದ್ದರಾಮ್ಯಯ್ಯ ಸರ್ಕಾರವನ್ನು ತಮ್ಮದೇ ಧಾಟಿಯಲ್ಲಿ ತರಾಟೆಗೆ ತೆಗೆದುಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT