ರಾಜಕೀಯ

ಪಕ್ಷ ತೊರೆಯುವ ಬಗ್ಗೆ ಸಾಕಷ್ಟು ಹಿಂದೆಯೇ ಆಲೋಚನೆ ಬಂದಿತ್ತು: ರಾಮಮೂರ್ತಿ

Manjula VN

ಬೆಂಗಳೂರು: ದಿಢೀರ್ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಮುಖಂಡ ಕೆ.ಸಿ.ರಾಮಮೂರ್ತಿಯವರು ರಾಜ್ಯಸಭಾ ಸದಸ್ಯ ಸ್ಥಾನ ಹಾಗೂ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಪಾಳಯಕ್ಕೆ ಬಿಗ್ ಶಾಕ್ ನೀಡಿದ್ದಾರೆ. 

ನಿನ್ನೆ ರಾಮಮೂರ್ತಿಯವರು ದೆಹಲಿಯಲ್ಲಿ ರಾಜ್ಯಸಭೆಯ ಸಭಾಪತಿಗಳೂ ಆಗಿರುವ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. ನಿವೃತ್ತ ಐಪಿಎಸ್ ಅಧಿಕಾರಿಯೂ ಆಗಿರುವ ರಾಮಮೂರ್ತಿ ಹಲವು ಶಿಕ್ಷಣ ಸಂಸ್ಥೆ ಹಾಗೂ ಉದ್ದಮೆಗಳ ಮಾಲೀಕರೂ ಹೌದು. ಅವರನ್ನು 2016ರಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಿಂದ ರಾಜ್ಯಸಭೆಗೆ ಆರಿಸಿ ಕಳುಹಿಸಿತ್ತು. ಅವರ ಅವಧಿ ಇನ್ನೂ ಮೂರು ವರ್ಷಗಳಿತ್ತು. ಮೇಲ್ನೋಟಕ್ಕೆ ಪಕ್ಷದಲ್ಲಿನ ಆಂತರಿಕ ಬೆಳವಣಿಗೆಗಳಿಂದ ಬೇಸತ್ತು ರಾಮಮೂರ್ತಿಯವರು ರಾಜೀನಾಮೆ ನೀಡಿದ್ದಾರೆಂದು ಹೇಳಲಾಗುತ್ತಿದೆ. 

ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಮಮೂರ್ತಿಯವರು, ಕಾಂಗ್ರೆಸ್ ಪಕ್ಷದ ವೇಗಕ್ಕೂ ನನ್ನ ವೇಗಕ್ಕೂ ತಾಳೆಯಾಗುತ್ತಿಲ್ಲ. ಕಾಂಗ್ರೆಸ್ ನಲ್ಲಿದ್ದು ನನಗೆ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದೆನಿಸುತ್ತಿಲ್ಲ. ಬಿಜೆಪಿ ಬಗ್ಗೆ ನನ್ನ ಒಲವಿದೆ. ಬಿಜೆಪಿಯ ಸಿದ್ಧಾಂತ ನನಗೆ ಹತ್ತಿರವಾಗಿದೆ. ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಬೇಕು. ದೇಶ ಅಭಿವೃದ್ಧಿಯಾಗಬೇಕು ಎಂಬ ಆಸೆಯಿಂದ ನಾನು ರಾಜೀನಾಮೆ ನೀಡುತ್ತಿದ್ದೇನೆಂದು ತಿಳಿಸಿದ್ದಾರೆ. 

ರಾಮಮೂರ್ತಿಯವರ ರಾಜೀನಾಮೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಉಗ್ರಪ್ಪ ಅವರು, ಬಿಜೆಪಿ ಆಪರೇಷನ್ ಕಮಲ ಮುಂದುವರೆಸಿ ಕಾಂಗ್ರೆಸ್ ನಾಯಕರನ್ನು ಖರೀದಿ ಮಾಡುತ್ತಿದೆ. ರಾಮಮೂರ್ತಿಯವರ ಮೇಲೆ ಬಿಜೆಪಿ ಐಟಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ ಎಂದಿದ್ದಾರೆ. 

SCROLL FOR NEXT