ರಾಜಕೀಯ

ತಿಹಾರ್ ಜೈಲಿನಿಂದ ಹೊರ ಬಂದಿರುವ ಡಿ.ಕೆ.ಶಿ ಸ್ವಾಗತಿಸಲು ಬೆಂಬಲಿಗರ ಪಡೆ ಸಜ್ಜು

Nagaraja AB

ಬೆಂಗಳೂರು: ಅಕ್ರಮ ಹಣಕಾಸು ವಹಿವಾಟು ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ಸೆರೆವಾಸ ಅನುಭವಿಸಿ ನ್ಯಾಯಾಲಯದಿಂದ ಜಾಮೀನು ಪಡೆದಿರುವ ಹೊರ ಬಂದಿರುವ ಮಾಜಿ ಸಚಿವ, ಹಿರಿಯ ಶಾಸಕ ಡಿ.ಕೆ. ಶಿವಕಮಾರ್ ಶನಿವಾರ ಬೆಂಗಳೂರಿಗೆ ಆಗಮಿಸುತ್ತಿದ್ದು, ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಅವರ ಬೆಂಬಲಿಗರ ಪಡೆ ಸಜ್ಜಾಗಿದೆ. 

ಮಧ್ಯಾಹ್ನ 1 ಗಂಟೆಗೆ ಡಿ.ಕೆ. ಶಿವಕುಮಾರ್ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅವರನ್ನು ಬರಮಾಡಿಕೊಳ್ಳಲು ಸಾವಿರಾರು ಜನಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ತೀರ್ಮಾನಿಸಿದ್ದಾರೆ.  ಬೃಹತ್ ಮೆರವಣಿಗೆ ಮುಖೇನ ಬರಮಾಡಿಕೊಳ್ಳುವ ಬೆಂಬಲಿಗರ ತೀರ್ಮಾನಕ್ಕೆ ಸ್ವತಃ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. 

ಸ್ವತಃ ತಾವೇ ಎಲ್ಲರನ್ನು ಭೇಟಿ ಮಾಡುತ್ತೇನೆ. ನೀವು ಬರಬೇಡಿ ಎಂದು ಹೇಳಿದ್ದಾರೆ. ಆದರೂ ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿ ವಿಮಾನ  ನಿಲ್ದಾಣದಿಂದ ಅವರನ್ನು ಕರೆತರಲು ಬೆಂಬಲಿಗರು ಮುಂದಾಗಿದ್ದಾರೆ.ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಮುಖರು, ಹಿರಿಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಡಿ.ಕೆ. ಶಿವಕುಮಾರ್ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 
 
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ರಾಜಕೀಯ ಮತ್ತು ವೈಯಕ್ತಿಕ ದ್ವೇಷದಿಂದ ಕಳೆದ ಕೆಲವು ವಾರಗಳಿಂದ ನಮ್ಮ ನಾಯಕ ಸೆರೆವಾಸ ಅನುಭವಿಸಬೇಕಾಯಿತು ಎಂದು ಅಭಿಮಾನಿಗಳು ನೊಂದುಕೊಂಡಿದ್ದಾರೆ. ಜಾಮೀನು ದೊರೆತ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಬರುತ್ತಿದ್ದು, ಅವರನ್ನು ನೋಡಲು ರಾಮನಗರ, ಕನಕಪುರ. ಬೆಳಗಾವಿ, ಬಳ್ಳಾರಿ, ಮೈಸೂರು, ಹೈದ್ರಾಬಾದ್ ಕರ್ನಾಟಕದಿಂದಲೂ ಬೆಂಬಲಿಗರ ದಂಡು ಹರಿದು ಬರುತ್ತಿದೆ.

ಡಿ.ಕೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಬಲಿ ಪಶು ಮಾಡಿದೆ. ಈ ಪ್ರಕರಣವನ್ನು ನಮ್ಮ ನಾಯಕರು ರಾಜಕೀಯ, ಕಾನೂನಾತ್ಮಕವಾಗಿ ಎದುರಿಸಲು ಸಮರ್ಥರಿದ್ದಾರೆ. ಎಲ್ಲಾ ಆರೋಪಗಳಿಂದ ಮುಕ್ತರಾಗಲಿದ್ದಾರೆ. ಮುಂಬರುವ ದಿನಗಳಲ್ಲಿ ನಮ್ಮ ನಾಯಕರನ್ನು ಕೆಣಕಿದವರಿಗೆ ಈ ಬೆಳವಣಿಗೆ ತಿರುಗುಬಾಣವಾಗಿ ಮಾರ್ಪಡಲಿದೆ ಎಂದು ಬೆಂಬಲಿಗರು ಹೇಳಿಕೊಂಡಿದ್ದಾರೆ.

ಸಿಎಂಎಲ್‌ಎ ನ್ಯಾಯಾಲಯ  ಡಿ.ಕೆ.ಶಿವಕುಮಾರ್ ಅವರಿಗೆ ವಿಧಿಸಿದ್ದ ನ್ಯಾಯಾಂಗ ಬಂಧನದ ಅವಧಿ ಇಂದು ಮುಕ್ತಾಯಗೊಳ್ಳಲಿದೆ. ಈಗಾಗಲೇ ದೆಹಲಿ ಹೈಕೋರ್ಟ್ ಜಾಮೀನು ನೀಡಿರುವುದರಿಂದ ನ್ಯಾಯಾಂಗ ಬಂಧನದ ಅವಧಿ ಅನೂರ್ಜಿತಗೊಳ್ಳಲಿದೆ. ಆದರೂ, ಔಪಚಾರಿಕವಾಗಿ ಸಿಎಂಎಲ್‌ಎ ನ್ಯಾಯಾಲಯ ವಿಚಾರಣೆ ನಡೆಸಿದೆ. ಈ ವೇಳೆ ಡಿ.ಕೆ.ಶಿವಕುಮಾರ್ ಖುದ್ದಾಗಿ ಹಾಜರಾಗಿದ್ದಾರೆ. ಹೈಕೋರ್ಟ್ ನೀಡಿರುವ ಜಾಮೀನು ಪ್ರತಿಯನ್ನು ಕೆಳಹಂತದ ನ್ಯಾಯಾಲಯಕ್ಕೆ ಸಲ್ಲಿಸಿ ಪಾರ್ಸ್‌ಪೋರ್ಟ್‌ನ್ನು ಒಪ್ಪಿಸಿ, ಕೆಲವು ನಿಯಮಗಳನ್ನು ಪಾಲನೆ ಮಾಡಿದ ಬಳಿಕ ಡಿ.ಕೆ.ಶಿವಕುಮಾರ್ ಸ್ವತಂತ್ರರಾಗಲಿದ್ದಾರೆ. 

ಈ ಮಧ್ಯೆ ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಡಿ,ಕೆ. ಶಿವಕುಮಾರ್, ಸದ್ಯಕ್ಕೆ ರಾಜಕಾರಣದ ಬಗ್ಗೆ ಏನನ್ನೂ ಮಾತನಾಡುವುದಿಲ್ಲ. ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ನಾನು ಕೊಲೆ, ಅತ್ಯಾಚಾರ ಮಾಡಿಲ್ಲ. ತಮ್ಮ ಬಗ್ಗೆ ಜನರಿಗೆ ಗೊತ್ತಿದೆ. ರಾಜಕಾರಣದ ಬಗ್ಗೆ  ಸದ್ಯಕ್ಕೆ ಏನನ್ನೂ ಮಾತನಾಡುವುದಿಲ್ಲ. ಸಮಯ ಬಂದಾಗ ಎಲ್ಲದಕ್ಕೂ ಪ್ರತಿಕ್ರಿಯಿಸುತ್ತೇನೆ.ತಿಹಾರ್ ಜೈಲಿನಲ್ಲಿದ್ದ ಬಗ್ಗೆ ದೀರ್ಘ ಕಥೆ, ಇತಿಹಾಸ ಇದೆ. ಅದನ್ನು ಮುಂದೆ  ಹೇಳುತ್ತೇನೆ ಎಂದು ಹೇಳಿದರು.

ನಾನು ಹಲವು ನಾಯಕರುಗಳಿಗೆ ಸಹಾಯ ಮಾಡಿದ್ದೇನೆ. ಅವರು ಉಪಕಾರ ಸ್ಮರಣೆ ಮಾಡುವುದು ಸಾಮಾನ್ಯ. ಆದರೆ ಏನನ್ನೂ ನನ್ನಿಂದ ಪಡೆಯದ ಸಾವಿರಾರು ಸಾಮಾನ್ಯ ಜನ ನನಗಾಗಿ ಪ್ರಾರ್ಥಿಸಿದರು. ಒಂದು ಸಣ್ಣ ಕರೆ ಕೊಟ್ಟಿದ್ದಕ್ಕೆ ಬೀದಿಗಿಳಿದು ಹೋರಾಟ ನಡೆಸಿದರು. ಅವರ ಋಣ ಹೇಗೆ ತೀರಿಸಬೇಕೆಂಬುದು ನನಗೆ ಗೊತ್ತಾಗುತ್ತಿಲ್ಲ. ಅವರ ಉಪಕಾರದ ಹೊರೆ  ನನ್ನ ಮೇಲೆ ಅಪಾರವಾಗಿದೆ. ಆ ಉಪಕಾರದ ಸ್ಮರಣೆಯನ್ನು ನಾನು ಮಾಡಬೇಕು. ಇವನೊಬ್ಬ ಆರೋಪಿ, ಲೂಟಿಕೋರ ಎಂದು ಬಿಂಬಿಸಲಾಗಿತ್ತು. ಆದರೆ ಜನರು ಇದ್ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ ನನಗೋಸ್ಕರ ಅಪಾರ ಸಂಖ್ಯೆಯಲ್ಲಿ ಬಂದು ಪ್ರತಿಭಟನೆ ನಡೆಸಿದರು. ಆ ಜನರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದರು.

ಇದಕ್ಕೂ ಮುನ್ನ ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಮುಖಂಡರನ್ನು ಭೇಟಿ ಮಾಡಿದ ಡಿ.ಕೆ.ಶಿ. ಚರ್ಚೆ ನಡೆಸಿದರು. ವಕೀಲರೊಂದಿಗೂ ಕೂಡ ಸಮಾಲೋಚನೆ ನಡೆಸಿದರು.

SCROLL FOR NEXT