ರಾಜಕೀಯ

ಬಿಎಸ್ ವೈಯಿಂದ ‌ದ್ವೇಷದ ರಾಜಕಾರಣ‌, ಆದ್ರೆ ಅಧಿಕಾರ ಯಾರಿಗೂ ಶಾಶ್ವತವಲ್ಲ: ಡಿಕೆಶಿ

Lingaraj Badiger

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದ್ವೇಷದ ರಾಜಕಾರಣ ಮುಂದುವರೆಸಿದ್ದು, ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಡಿ‌.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಕಪುರದಲ್ಲಿ ವೈದ್ಯಕೀಯ ‌ಕಾಲೇಜು ಸ್ಥಾಪನೆ ಈ ಹಿಂದಿನ‌ ಸರ್ಕಾರದ ‌ತೀರ್ಮಾನವಾಗಿತ್ತು. ಆದರೆ ಯಡಿಯೂರಪ್ಪ ‌ದ್ವೇಷದ ರಾಜಕಾರಣ‌ ಮಾಡುತ್ತಿದ್ದಾರೆ. ಅಧಿಕಾರ ಯಾರಿಗೂ‌ ಶಾಶ್ವತವಲ್ಲ. ಕನಕಪುರಕ್ಕೆ ಮೆಡಿಕಲ್‌ ಕಾಲೇಜು ನೀಡಲೇಬೇಕು. ಈ ಬಗ್ಗೆ ಅವರ ಜತೆ ಮಾತುಕತೆ‌ ನಡೆಸಲಾಗುವುದು ಎಂದರು.

ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿರುವುದಕ್ಕೆ ತಮ್ಮ ಆಕ್ಷೇಪವಿಲ್ಲ. ಆದರೆ ಕನಕಪುರಕ್ಕೆ ಮಂಜೂರಾಗಿರುವ ಕಾಲೇಜು ಆರಂಭಿಸಲು ಅಡ್ಡಿಪಡಿಸಬಾರದು. ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ ಕುಮಾರಸ್ವಾಮಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಕನಕಪುರಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿದ್ದರು.‌ ಆದರೆ ಈಗ ಕಾಲೇಜು ಸ್ಥಾಪನೆಗೆ ಅಡ್ಡಿಪಡಿಸುವುದು ಸರಿಯಲ್ಲ. ಬಜೆಟ್ ನಲ್ಲಿ‌ಈ ಬಗ್ಗೆ ಘೋಷಣೆಯಾಗಿದ್ದು, ಈ ‌ಕುರಿತು ಯಡಿಯೂರಪ್ಪ ನಮ್ಮ ಮನವಿಯನ್ನು ಪರಿಗಣಿಸಬೇಕು ಎಂದರು.

ಅಧಿಕಾರ ಶಾಶ್ವತ ಅಲ್ಲ. ಹೀಗಾಗಿ ಕನಕಪುರಕ್ಕೆ ವೈದ್ಯಕೀಯ ಕಾಲೇಜು ನೀಡುವ ವಿಚಾರದಲ್ಲಿ ಸರ್ಕಾರ ಹಿಂಜರಿಯುವುದು ಬೇಡ. ಚಿಕ್ಕಬಳ್ಳಾಪುರಕ್ಕೂ ಮತ್ತೊಂದು ಕಾಲೇಜು ಮಂಜೂರು ಮಾಡಲಿ ನಮ್ಮದೇನೂ ಅಭ್ಯಂತರವಿಲ್ಲ. ಕೆಲವು ನಾಯಕರು ನಾನು ಅಕ್ಕಿ ಕೊಟ್ಟೆ, ಸೈಕಲ್ ಕೊಟ್ಟೆ, ಸಾಲಮನ್ನಾ ಮಾಡಿದೆ ಅಂತಾರೆ. ಹಾಗೆಯೇ ಕನಕಪುರಕ್ಕೆ ವೈದ್ಯಕೀಯ ಕಾಲೇಜು ತರುವುದು ನನ್ನ ಲೈಫ್​ಟೈಮ್ ಗುರಿ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಈ ವಿಚಾರದಲ್ಲಿ ರಾಜಕೀಯ ಮಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ” ಎಂದು ಎಚ್ಚರಿಸಿದ್ದಾರೆ.

SCROLL FOR NEXT