ರಾಜಕೀಯ

'ದಸರಾ ಮಿನಿಸ್ಟ್ರು' ಎಂದು ಕರೆದ ಕುಮಾರಸ್ವಾಮಿಗೆ ಸಚಿವ ಸೋಮಣ್ಣ ತಿರುಗೇಟು

Sumana Upadhyaya

ಮೈಸೂರು: ತಮ್ಮನ್ನು ದಸರಾ ಮಿನಿಸ್ಟ್ರು ಎಂದು ಕರೆದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ವಸತಿ ಖಾತೆ ಸಚಿವ ವಿ ಸೋಮಣ್ಣ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿಯವರು ಚಾಮುಂಡೇಶ್ವರಿ ದೇವಿ ಮುಂದೆ ನಿಂತುಕೊಂಡು ತಮ್ಮ 14 ತಿಂಗಳ ಆಡಳಿತವನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ, ರಾಜ್ಯದ ಜನತೆಯ ಕಷ್ಟ-ಸುಖ ಆಲಿಸುತ್ತಿದ್ದಾರೆ. ಮುಂದಿನ ತಿಂಗಳು ದಸರಾ ಹಬ್ಬವಿರುವುದರಿಂದ ನಾನು ಮೈಸೂರಿನಲ್ಲಿ ಅದಕ್ಕೆ ಸಂಬಂಧಪಟ್ಟ ಕೆಲಸದಲ್ಲಿ ನಿರತನಾಗಿದ್ದೇನೆ ಎಂದರು.

ಬೇರೆಲ್ಲಾ ಕೆಲಸ ಬಿಟ್ಟು ದಸರಾ ಹಬ್ಬಕ್ಕೆ ಏಕೆ ಇಷ್ಟೊಂದು ಪ್ರಾಮುಖ್ಯತೆ ನೀಡುತ್ತಿದ್ದೀರಿ ಎಂದು ಸುದ್ದಿಗಾರರು ಕೇಳಿದಾಗ, ಇದು ನಮ್ಮ ನಾಡಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಬ್ಬ. ರಾಜ್ಯದ ಆರೂವರೆ ಕೋಟಿ ಕನ್ನಡಿಗರಿಗೆ ಸಂಬಂಧಿಸಿದ ನಾಡಹಬ್ಬ ದಸರಾ ನಮ್ಮ ಸಂಸ್ಕೃತಿಯ ಪ್ರತೀಕ. ಮೈಸೂರು ಒಡೆಯರ್ ಅವರ ಪರಂಪರೆಯನ್ನು ಸಾರುವ ದಸರಾ ಹಬ್ಬವನ್ನು ಆಚರಿಸಲು ಎಲ್ಲಾ ತಾಲ್ಲೂಕುಗಳಿಗೆ ಹೋಗಿ ಜನರ ಪಾಲ್ಗೊಳ್ಳುವಿಕೆಗೆ ಪ್ರೇರೇಪಿಸುತ್ತೇನೆ. ಇಂದಿನ ಯುವ ಜನಾಂಗಕ್ಕೆ ದಸರಾ ಆಚರಣೆಯ ಮಹತ್ವ ಸಾರಬೇಕು. ಈ ವಿಷಯದಲ್ಲಿ ಕುಮಾರಸ್ವಾಮಿಯವರ ಬಳಿ ಏನಾದರೂ ಸಲಹೆಗಳಿದ್ದರೆ ಕೊಡಲಿ ಎಂದರು.


ಕುಮಾರಸ್ವಾಮಿಯರು 1996ರಲ್ಲಿ ರಾಜಕೀಯ ಪ್ರವೇಶಿಸಿದರು. ನಾನು ರಾಜಕೀಯಕ್ಕೆ ಬಂದಿದ್ದು 1983ರಲ್ಲಿ. ದೇವರ ಆಶೀರ್ವಾದ, ಅದೃಷ್ಟದಿಂದ ಕುಮಾರಸ್ವಾಮಿಯವರು ಎರಡು ಬಾರಿ ಮುಖ್ಯಮಂತ್ರಿಯಾದರು ಎಂದರು.  ದಸರಾ ಹಬ್ಬ ಮುಗಿದ ಮೇಲೆ ವಸತಿ ಸಚಿವಾಲಯಕ್ಕೆ ಸಂಬಂಧಿಸಿದ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ ಎಂದರು.

SCROLL FOR NEXT