ರಾಜಕೀಯ

ಮಧ್ಯಂತರ ಚುನಾವಣೆ ನಡೆಸಲು ಸಿದ್ದರಾಮಯ್ಯ ಆಯೋಗದ ಏಜೆಂಟರೇ?: ಎಸ್‍.ಟಿ.ಸೋಮಶೇಖರ್

Lingaraj Badiger

ಬೆಂಗಳೂರು: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇನು ಚುನಾವಣಾ ಆಯೋಗದ ಏಜೆಂಟರೇ? ಎಂದು ಕಾಂಗ್ರೆಸ್ ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಪ್ರಶ್ನಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ ಅವರುಗಳು ನೀಡುವ ಹೇಳಿಕೆಯೇ ಅಧಿಕೃತ ಹಾಗೂ ಅಂತಿಮವಲ್ಲ. ಚುನಾವಣೆ ಬಗ್ಗೆ ಆಯೋಗ ಸ್ಪಷ್ಟಪಡಿಸಬೇಕೇ ಹೊರತು ಇವರಲ್ಲ. ಇವರಿಗೆ ಆಯೋಗದ ಮೇಲೆ ಯಾವುದೇ ನಿಯಂತ್ರಣ ಇಲ್ಲ ಎಂದರು.

ಅನರ್ಹ ಶಾಸಕರು ಇದೀಗ ಬಿಜೆಪಿ ಮುಂದೆ ಭಿಕ್ಷುಕರಾಗಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸೋಮಶೇಖರ್, ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲುಕಂಡಿರುವ ಕಾಂಗ್ರೆಸ್ ನಾಯಕರಿಗೆ ಮಾಡಲು ಯಾವುದೇ ಕೆಲಸವಿಲ್ಲ. ಹೀಗಾಗಿ ಪ್ರತಿದಿನ ನಮ್ಮದೇ ಜಪ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಯೋಗೀಶ್ವರ್ ಅವರಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಅಶ್ವತ್ಥನಾರಾಯಣ ಅವರ ಜೊತೆ ಮಾತುಕತೆಯೂ ನಡೆದಿಲ್ಲ. ನಮ್ಮ ಪ್ರಕರಣ ಸದ್ಯದಲ್ಲೇ ವಿಚಾರಣೆಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 

SCROLL FOR NEXT