ರಾಜಕೀಯ

ರಾಜಕೀಯ ತೆವಲಿಗೆ ದೇಶಭಕ್ತ ಸಂಘಟನೆ ಮೇಲೆ ಸುಳ್ಳು ಆರೋಪ  ಬೇಡ; ಸಂಘ ದೇಶದ್ರೋಹಿಯೂ ಅಲ್ಲ, ಜಾತಿವಾದಿಯೂ ಅಲ್ಲ!

Shilpa D

ಚಿಕ್ಕಮಗಳೂರು: ಸಂಘ ಜಾತಿವಾದಿಯೂ ಅಲ್ಲ. ದೇಶದ್ರೋಹಿಯೂ ಅಲ್ಲ. ಸಂಘವನ್ನ ಟೀಕಿಸುವ ಭರದಲ್ಲಿ ದೇಶ ಒಡೆಯುವ ಸಂಚು ರೂಪಿಸುವ ಮನೋಭಾವನೆ ಇರುವವರಿಗೆ ಬೆಂಬಲಿಸುವ ಪಾಪದ ಕೆಲಸಕ್ಕೆ ಹೋಗಬೇಡಿ,  ಅದಕ್ಕೆ ಬಲಿಯಾಗಬೇಡಿ ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ  ಸಲಹೆ ನೀಡಿದ್ದಾರೆ. 

ಸಂಘ ಪರಿವಾರದವರು ಕೊಲೆ ಆರೋಪಿಗಳು ಎಂದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿರುವ ಸಿಟಿ ರವಿ,  ನೀವೇ ಐದು ವರ್ಷ ಅಧಿಕಾರದಲ್ಲಿದ್ದಿರಿ. ಸಂಘ ಪರಿವಾರ ಯಾವುದಾದರೂ  ಹತ್ಯೆಯಲ್ಲಿ ಭಾಗಿಯಾಗಿದ್ದರೆ, ಸಂಘವನ್ನು ನಿಷೇಧ ಮಾಡಲು ಶಿಫಾರಸು ಮಾಡಬಹುದಿತ್ತು. ಆಗ ನಿಮಗೆ ಬ್ಯಾಟರಿ ಇರಲಿಲ್ವಾ? ಎಂದು ಸಚಿವ ಸಿ.ಟಿ. ರವಿ ಮಾಜಿ ಸಿಎಂ  ಸಿದ್ದರಾಮಯ್ಯ ವಿರುದ್ಧ ಕಟುವಾಗಿ ಟೀಕಿಸಿದ್ದಾರೆ.

ವಯಸ್ಸಾದ ಮೇಲೆ ಪ್ರಬುದ್ಧತೆ ಬರಬೇಕು. ಮನಸ್ಸು ಪಕ್ವ ಆಗಬೇಕು. ಪೂರ್ವಾಗ್ರಹ ಪೀಡಿತ ಮನೋಭಾವನೆಯಿಂದ ಹೊರಬರಬೇಕೆಂದು ಮಾತಿನಲ್ಲಿ ತಿವಿದಿದ್ದಾರೆ. ಸಂಘವನ್ನು ನೀವು ಎಷ್ಟು ಹತ್ತಿರದಿಂದ ನೋಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. 

ನಾನು ಸಂಘದ ಸ್ವಯಂಸೇವಕ. ಹಾಗಾಗಿಯೇ ಶಾಸಕ, ಸಚಿವನಾಗಿರೋದು. ನರೇಂದ್ರ ಮೋದಿಯವರು ಪ್ರಧಾನಿಯಾಗಿರೋದು. ಸಂಘ ಹೇಳಿಕೊಡೋದು ದೇಶಭಕ್ತಿ ಹಾಗೂ ಸಂಸ್ಕಾರವನ್ನು. ಟೀಕೆ ಮಾಡುವವರನ್ನು ಹತ್ಯೆ ಮಾಡಬೇಕೆಂಬುದು ಸಂಘದ ಮನೋಭಾವವಾಗಿದ್ದರೆ ಬಹಳ ಜನ ಭೂಮಿ ಮೇಲೆ ಇರುತ್ತಿರಲಿಲ್ಲ. ಟೀಕಿಸಿಯೂ ಉಳಿದಿದ್ದಾರೆಂದರೆ ಸಂಘ ಹತ್ಯೆ ರಾಜಕಾರಣದ ಮೇಲೆ ನಂಬಿಕೆ ಇಟ್ಟಿಲ್ಲ ಎಂದು ಅರ್ಥ ಎಂದಿದ್ದಾರೆ.

ಗಾಂಧೀಜಿಯ ಹತ್ಯೆ ಆರೋಪವನ್ನು ನಿಮ್ಮ ಕಾಂಗ್ರೆಸ್ ಮುಖಂಡರು ಸಂಘದ ಮೇಲೆ ಹಾಕಿದ್ದರು. ಅಂದಿನ ಸರ್ಕಾರವೇ ನೇಮಕ ಮಾಡಿದ್ದ ಕಪೂರ್ ಕಮಿಷನ್ ಗಾಂಧಿ ಹತ್ಯೆಗೂ ಆರ್.ಎಸ್.ಎಸ್.ಗೂ ಸಂಬಂಧವಿಲ್ಲ ಎಂದಿತ್ತು. ನಿಮ್ಮ ರಾಜಕೀಯ ತೆವಲಿಗೆ ದೇಶಭಕ್ತ ಸಂಘಟನೆ ಮೇಲೆ ಸುಳ್ಳು ಆರೋಪ ಮಾಡುವ ಕೆಲಸ ಮಾಡಬೇಡಿ ಎಂದು ಕಿಡಿ ಕಾರಿದ್ದಾರೆ.

SCROLL FOR NEXT