ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹೋರಾಡಲು ಎಐಸಿಸಿ ಯುವ ನಾಯಕ ರಾಹುಲ್ ಗಾಂಧಿಯವರೇ ಸೂಕ್ತ ವ್ಯಕ್ತಿಯಾಗಿದ್ದು, ಸಾಂಸ್ಥಿಕ ಚುನಾವಣೆಯ ನಂತರ ರಾಹುಲ್ ಗಾಂಧಿ ಮತ್ತೆ ಎಐಸಿಸಿ ಅಧ್ಯಕ್ಷರಾಗುವ ವಾತಾವರಣವಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಹೆಚ್.ಮುನಿಯಪ್ಪ, ನಿನ್ನೆ ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ತಾವು ಸೇರಿದಂತೆ ಎಲ್ಲಾ 52 ಸದಸ್ಯರು ಭಾಗವಹಿಸಿದ್ದರು. ಸಭೆಯಲ್ಲಿ ರಾಹುಲ್ ಗಾಂಧಿ, ಸೋನಿಯಾಗಾಂಧಿಯವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿರುವ ಸಮಯದಲ್ಲಿ ಈ ರೀತಿ ಪತ್ರ ಬರೆದಿದ್ದು ಏಕೆ ಎಂದು ಪ್ರಶ್ನಿಸಿ ಬೇಸರ ವ್ಯಕ್ತಪಡಿಸಿದ್ದಾರೆಯೇ ಹೊರತು ಅವರೆಲ್ಲಿಯೂ ಪಕ್ಷದ 23 ಹಿರಿಯ ನಾಯಕರು ಬಿಜೆಪಿ ಜತೆ ಕೈ ಜೋಡಿಸಿದ್ದಾರೆ ಎಂದು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸಿ.ಡಬ್ಲ್ಯು.ಸಿ ಸಭೆಯಲ್ಲಿ ಎಲ್ಲಾ ಸದಸ್ಯರಿಗೂ ಮಾತನಾಡಲು ಇದೇ ಮೊದಲ ಬಾರಿ ಅವಕಾಶ ಕಲ್ಪಿಸಿ ಸುದೀರ್ಘ ಚರ್ಚೆ ನಡೆಸಲಾಗಿದೆ. ಆನಂದ್ ಶರ್ಮಾ, ಮುಕುಲ್ ವಾಸ್ನಿಕ್, ಕಪಿಲ್ ಸಿಬಲ್ ಎಲ್ಲರೂ ಪಕ್ಷನಿಷ್ಠರೇ. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಯಾರೂ ಸಹ ಸೋನಿಯಾ ಗಾಂಧಿಯವರ ನಾಯಕತ್ವದ ಪ್ರಶ್ನಿಸಿಲ್ಲ.
ಕೊಲ್ಕತ್ತಾ ಅಧಿವೇಶನದ ನಂತರ ಇಲ್ಲಿಯವರೆಗೆ ಕಾರ್ಯಕಾರಿ ಸಮಿತಿ ಆಯ್ಕೆ, ಎಐಸಿಸಿ ಅಧಿವೇಶನ ನಡೆದಿರಲಿಲ್ಲ. ಸಂಪ್ರದಾಯದಂತೆ ಅಧಿವೇಶನ ನಡೆಯಬೇಕೆನ್ನುವುದು ಎಲ್ಲರ ಅಭಿಪ್ರಾಯವಾಗಿತ್ತು. ಪಕ್ಷದ ತಾಯಿ ಸ್ಥಾನದಲ್ಲಿರುವ ಸೋನಿಯಾ ಗಾಂಧಿ ಪಕ್ಷ ಎಂದ ಮೇಲೆ ಮಾತುಗಳು ಬರುವುದು ಸಹಜ. ಇವೆಲ್ಲದಕ್ಕೆ ಆಸ್ಪದ ನೀಡದೇ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದಿದ್ದಾರೆ ಎಂದು ಕೆ.ಹೆಚ್.ಮುನಿಯಪ್ಪ ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿ ಎದುರು ನಿಲ್ಲುವ ಶಕ್ತಿ ಇರುವುದು ರಾಹುಲ್ ಗಾಂಧಿ ಅವರಿಗೆ ಮಾತ್ರ. ಮೋದಿ ವಿರುದ್ಧ ಫೈಟ್ ಮಾಡೋಕೆ ರಾಹುಲ್ ಸೂಕ್ತವಾದ ವ್ಯಕ್ತಿ. ರಾಹುಲ್ ಪ್ರಶ್ನೆಗೆ ಮೋದಿ ಉತ್ತರಿಸೋಕೆ ಆಗುತ್ತಿಲ್ಲ. ಕಾಂಗ್ರೆಸ್ ಅಧ್ಯಕ್ಷರಾಗಲು ರಾಹುಲ್ ಗಾಂಧಿಯವರೇ ಮುಂದೆ ಬರಬೇಕು. ಬಿಜೆಪಿಯವರು ಕೇವಲ ಹಿಂದುತ್ವ ಹಿಂದುತ್ವ ಎನ್ನುತ್ತಾ ಇದ್ದರೆ ಹೇಗೆ? ನಾವೆಲ್ಲರೂ ಹಿಂದೂಗಳೇ ಅಲ್ಲವೇ? ಜೈನ್, ಸಿಖ್, ಬೌದ್ಧ ಎಲ್ಲರೂ ದೇಶದಲ್ಲಿ ಬಾಳಬೇಕಲ್ಲವೆ? ಸಂವಿಧಾನಕ್ಕೆ ಬಿಜೆಪಿಯವರು ಗೌರವ ಕೊಡಬೇಕು. ಎಲ್ಲಾ ಧರ್ಮಗಳಿಗೆ ಬದುಕುವ ಅವಕಾಶ ನೀಡಬೇಕು. ಆಗ ಮಾತ್ರ ದೇಶ ಪ್ರಗತಿಯತ್ತ ಸಾಗುತ್ತದೆ ಎಂದು ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.