ರಾಜಕೀಯ

ಕುರುಬ ಸಮುದಾಯವನ್ನು ಛಿದ್ರ ಮಾಡಲು ಆರ್ ಎಸ್ ಎಸ್ ಹುನ್ನಾರ: ಸಿದ್ದರಾಮಯ್ಯ

Shilpa D

ಬೆಂಗಳೂರು: ಕುರುಬ ಸಮುದಾಯದ ಒಗ್ಗಟ್ಟನ್ನು ಹೊಡೆಯಲು ಸಂಚು ರೂಪಿಸಿರುವ ಆರ್‌ಎಸ್‌ಎಸ್  ಕುರುಬ ಸಮುದಾಯವನ್ನು ಎಸ್ ಟಿ ಗೆ ಸೇರಿಸುವ ವರಸೆ ಶುರುಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.  

ಬೆಂಗಳೂರಿನಲ್ಲಿ  ಮಾತನಾಡಿದ ಸಿದ್ದರಾಮಯ್ಯ ಕುರುಬ ಸಮುದಾಯದ ಒಗ್ಗಟ್ಟನ್ನು ಛಿದ್ರಗೊಳಿಸುವ ಈ ಕುತಂತ್ರದ ಹಿಂದೆ ಆರ್ ಎಸ್ ಎಸ್ ಕೈವಾಡವಿದೆ ಎಂದು ದೂರಿದ್ದಾರೆ.

ದಕ್ಷಿಣ ರಾಜ್ಯಗಳಿಗೆ ಅತಿಕ್ರಮಣ ಮಾಡುವ ಪ್ರಯತ್ನದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತ ಬ್ಯಾಂಕ್ ಅನ್ನು ವಿಭಜಿಸಿ ಅನೇಕ ಸಮುದಾಯಗಳನ್ನು ತನ್ನ ಪರ ಮಾಡಿಕೊಳ್ಳಲು ಚಿಂತನೆ ನಡೆಸುತ್ತಿವೆ ಎಂದು ಹೇಳಿರುವ ಸಿದ್ದರಾಮಯ್ಯ, ಅಹಿಂದ ಚಾಂಪಿಯನ್ ಎಂದೇ ಹೆಸರುವಾಸಿಯಾಗಿದ್ದಾರೆ.

ಸಚಿವ ಈಶ್ವರಪ್ಪಗೆ ಇದ್ದಕ್ಕಿದ್ದಂತೆ ಕುರುಬರ ಬಗ್ಗೆ ಕಾಳಜಿ ಬಂದಿದೆ.  ಹಿಂದೆ ಕನಕ ಗೋಪುರ ಕೆಡವಿದಾಗ ಎಲ್ಲಿಗೆ ಹೋಗಿದ್ದಪ್ಪಾ? ಈವರೆಗೆ ಮಂಡಲ್ ಕಮೀಷನ್ ಬಗ್ಗೆ ಏನಾದ್ರೂ‌ ಮಾತನಾಡಿದ್ದೀಯಾ, ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿದ್ದ ರಾಮಾಜೋಯಿಸ್ ಸುಪ್ರೀಂ ಕೋರ್ಟಿನಲ್ಲಿ ಮಂಡಲ್ ಆಯೋಗದ ಶಿಫಾರಸನ್ನು ಚಾಲೆಂಜ್ ಮಾಡಿದ್ದರು.‌ ಆಗ ಎಲ್ಲಿಗೆ ಹೋಗಿದ್ದಪ್ಪಾ?  ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಸಂವಿಧಾನ ಸುಟ್ಟುಹಾಕಿ ಎಂದು ಹೇಳಿಕೆ ಕೊಟ್ಟಿದ್ದರು, ಆಗಲೂ ಕೆ.ಎಸ್. ಈಶ್ವರಪ್ಪ ಬಿಜೆಪಿಯಲ್ಲೇ ಇರಲಿಲ್ವಾ? ರಾಮಜೋಯಿಸ್ ಬಿಜೆಪಿಯವರಲ್ವಾ? ರಾಮಾಜೋಯಿಸ್ ಅವರ ವಿರುದ್ಧ ಯಾಕೆ ಮಾತನಾಡಲಿಲ್ಲ? ಹಿಂದುಳಿದವರ ವಿರುದ್ಧ ರಾಮಾ ಜೋಯಿಸ್ ಚಾಲೆಂಜ್ ಮಾಡಿದ್ದರೂ ಸುಮ್ಮನಿದ್ದದ್ದು ಏಕೆ? ಎಂದು ಪ್ರಶ್ನಿಸಿದ್ದಾರೆ.

ಈಶ್ವರಪ್ಪ ಮುಗ್ಧ ಜನರಿಗೆ ಮೋಸ ಮಾಡಲು ಹೊರಟಿದ್ದಾರೆ. ಅವರನ್ನು ಪ್ರಭಾವಿ ನಾಯಕ ಅಂತ ಯಾರು ಹೇಳಿದ್ದು? ಅವರು ಸದನದ ಹೊರಗೆ ಅಥವಾ ಒಳಗೆ ಏನಾದರೂ ಮಾತನಾಡಿದ್ದಾರಾ? ಇದು ಈಶ್ವರಪ್ಪನ ಸ್ವಂತ ಬುದ್ಧಿಯಲ್ಲ. ಆರ್ ಎಸ್ ಎಸ್ ನವರು ಇವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಕುರುಬ ಸಮುದಾಯ ನಡೆಸುವ ಪ್ರತಿಭಟನೆಯಲ್ಲಿ ನಾನು ಪಾಲ್ಗೋಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಐಎಸ್‌ ಸಂಘಟನೆ ಇಸ್ಲಾಮಿಕ್‌ ರಾಜ್ಯ ಸ್ಥಾಪನೆಗಾಗಿ ಮುಸ್ಲಿಂ ಸಮುದಾಯದ ಹೆಸರು ಬಳಸಿಕೊಳ್ಳುತ್ತಿದೆ. ಅದೇ ರೀತಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಮುಸ್ಲಿಂ ಸಮುದಾಯದ ಹೆಸರು ಬಳಸಿಕೊಳ್ಳುತ್ತಿದ್ದಾರೆ. ಇಬ್ಬರಿಂದಲೂ ಅವಮಾನವಾಗುತ್ತಿರುವುದು ಮುಸ್ಲಿಂ ಸಮುದಾಯಕ್ಕೆ’ ಎಂದು ರಾಜ್ಯ ಬಿಜೆಪಿ ಘಟಕ ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ಸಂವಿಧಾನದ ಮೇಲೆ ನಂಬಿಕೆ, ಗೌರವ ಇಟ್ಟುಕೊಂಡವನು ನಾನು.

ಸಹಬಾಳ್ವೆ, ಸಹಿಷ್ಟುತೆ, ಬಹುತ್ವದ ಮೇಲೆ ನಂಬಿಕೆ ಇದೆ. ಆದರೆ, ಬಿಜೆಪಿಯವರಿಗೆ ಸಂವಿಧಾನದ ಮೇಲೆ ನಂಬಿಕೆಯೇ ಇಲ್ಲ. ಹೀಗಾಗಿ, ಅವರು ಹೇಳಿದ್ದು ಅವರಿಗೇ ಅನ್ವಯಿಸುತ್ತದೆ’ ಎಂದು ಸಿದ್ದರಾಮಯ್ಯ ಗರಂ ಆದರು. ‘ಪ್ರಚೋದನೆ ಮಾಡುವುದು, ಬೆಂಕಿ ಇಡುವುದು, ಹುಳಿ ಹಿಂಡುವುದು ಬಿಜೆಪಿ ಕೆಲಸ. ಯಾರದ್ದು ಐಸಿಸ್ ಉಗ್ರರ ಮನಸ್ಥಿತಿ ಎಂಬುದನ್ನು ಜನರೇ ನಿರ್ಧರಿಸಬೇಕು’ ಎಂದು ನುಡಿದರು.

SCROLL FOR NEXT