ರಾಜಕೀಯ

ಸಂಪುಟ ವಿಸ್ತರಣೆ ಕುರಿತು ಬಾಯಿಗೆ ಬಂದಂತೆ ಬಹಿರಂಗವಾಗಿ ಮಾತನಾಡಿದರೆ ಶಿಸ್ತುಕ್ರಮ: ಅರವಿಂದ ಲಿಂಬಾವಳಿ

Shilpa D

ಬೆಳಗಾವಿ: ಸಚಿವ ಸಂಪುಟ‌ ವಿಸ್ತರಣೆಗೆ ಸಂಬಂಧಿಸಿದಂತೆ ಪಕ್ಷದ ಶಾಸಕರು ಅಥವಾ ಮುಖಂಡರು ಬಾಯಿಗೆ ಬಂದಂತೆ ಬಹಿರಂಗವಾಗಿ ಮಾತನಾಡುವುದನ್ನು ಪಕ್ಷ‌ ಗಂಭೀರವಾಗಿ ಪರಿಗಣಿಸುತ್ತದೆ. ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಎಚ್ಚರಿಕೆ ನೀಡಿದರು.

ಬೆಳಗಾವಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಶಾಸಕರು ಮಾತನಾಡಬಾರದು, ‘ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಇಂದಿನ ಸಭೆಯಲ್ಲಿ ಚರ್ಚೆ ಆಗಿಲ್ಲ. ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಅವರಿಗೆ ಇರುವ ಪರಮಾಧಿಕಾರ. ಈ ವಿಷಯದಲ್ಲಿ ಅವರು ಕೇಂದ್ರದ ನಾಯಕರೊಂದಿಗೆ ‌ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ. 

ಆದ್ದರಿಂದ ಶಾಸಕರು ಬಹಿರಂಗ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು’ ಎಂದು ಹೇಳಿದರು. ‘ಯಾರು ಮಂತ್ರಿ ಆಗಬೇಕು ಎನ್ನುವ ಬಗ್ಗೆಯೂ ಚರ್ಚೆಯಾಗಿಲ್ಲ. ವಿಸ್ತರಣೆ ಹಾಗೂ ದಿನಾಂಕ ನಿಗದಿ ಮಾಡುವ ಅಧಿಕಾರವೂ ಮುಖ್ಯಮಂತ್ರಿಯವರಿಗಿದೆ’ ಎಂದರು. ಯಾರಾದರೂ ಮತ್ತೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬಹಿರಂಗ ಹೇಳಿಕೆ ನೀಡಿದರೇ ಅಂತವರ ವಿರುದ್ಧ ಪಕ್ಷ ಶಿಸ್ತುಕ್ರಮ ಜರುಗಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಡಿ.5 ರಂದು ನಡೆಯುವ ರಾಜ್ಯ ಕಾರ್ಯಕಾರಿಣಿಯಲ್ಲಿ ಎರಡು ಮಹತ್ವದ ವಿಷಯಗಳ ಬಗ್ಗೆ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು. ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ‘ಲವ್ ಜಿಹಾದ್’ ತಡೆಗೆ ಕಾಯ್ದೆ ಮಾಡುವಂತೆ ನಿರ್ಣಯಿಸಲಾಗುವುದು ಎಂದು ತಿಳಿಸಿದರು.

ರಾಜ್ಯದ 310 ಬ್ಲಾಕ್‌ಗಳ 270 ಸ್ಥಳಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ಗ್ರಾಮ ಪಂಚಾಯಿತಿ ಚುನಾವಣೆಯ ತರಬೇತಿ ಶಿಬಿರಗಳನ್ನು ನಡೆಸಲಾಗುವುದು ಎಂದು ಲಿಂಬಾವಳಿ ಹೇಳಿದ್ದಾರೆ.  ಪಕ್ಷದ ಸಾಮಾನ್ ಕಾರ್ಯಕರ್ತನಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗುವುದು. ಗ್ರಾಮ ಪಂಚಾಯತಿ ಚುನಾವಣೆನ್ನು ಗಂಭೀರವಾಗಿ ಪರಿಗಣಿಸಿದ್ದು, ಸಚಿವರನ್ನೊಳಗೊಂಡ ಆರು ತಂಡ ರಚಿಸಿದ್ದು ಗ್ರಾಮ ಸ್ವರಾಜ್ಯ ಸಮಾವೇಶ ನಡೆಯಲಿದೆ ಎಂದು ಲಿಂಬಾವಳಿ ಮಾಹಿತಿ ನೀಡಿದ್ದಾರೆ.

SCROLL FOR NEXT