ರಾಜಕೀಯ

ಸುಳ್ಳು ಹೇಳುವುದರಲ್ಲಿ, ಕಣ್ಣೀರು ಸುರಿಸುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮ: ಮಾಜಿ ಸಿಎಂ ಸಿದ್ದರಾಮಯ್ಯ 

Sumana Upadhyaya

ಬೆಳಗಾವಿ: ಜೆಡಿಎಸ್ ನಾಯಕ ಕುಮಾರಸ್ವಾಮಿ ಕಣ್ಣಲ್ಲಿ ನೀರು ಬರುವುದು ಹೊಸದಲ್ಲ. ಒಳ್ಳೆದು-ಕೆಟ್ಟದು ಎರಡಕ್ಕೂ ಅವರು ಕಣ್ಣೀರು ಸುರಿಸುತ್ತಿರುತ್ತಾರೆ. ಅವರ ಕಣ್ಣೀರಿಗೆ ಬೆಲೆ ಇಲ್ಲ. ದೇವೇಗೌಡ ಕುಟುಂಬದಲ್ಲಿ ಅದು ಸಾಮಾನ್ಯ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸುಳ್ಳು ಹೇಳುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮ. ಅವರ ಅನುಕೂಲಕ್ಕೆ ತಕ್ಕಂತೆ ಅವರು ಹೇಳಿಕೆ ನೀಡುತ್ತಿರುತ್ತಾರೆ. 2018ರಲ್ಲಿ ಜೆಡಿಎಸ್ ಗೆದ್ದಿದ್ದು ಕೇವಲ 37 ಸೀಟುಗಳು. ಕಾಂಗ್ರೆಸ್ 80 ಸೀಟುಗಳನ್ನು ಗೆದ್ದಿದೆ. ಅದರ ಹೊರತಾಗಿಯೂ ನಾವು ಸಿಎಂ ಹುದ್ದೆಯನ್ನು ಅವರಿಗೆ ನೀಡಿದೆವು. ಸಮ್ಮಿಶ್ರ ಸರ್ಕಾರದಲ್ಲಿ ಅವರು 12 ತಿಂಗಳು ಆಡಳಿತ ನಡೆಸಿದ್ದರು. ಅದು ಹೊಟೇಲ್ ನಲ್ಲಿ ಕುಳಿತು, ಸಚಿವರಾಗಲಿ, ಶಾಸಕರಾಗಲಿ ಯಾರ ಕೈಗೂ ಕುಮಾರಸ್ವಾಮಿ ಸಿಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಸಾವಿರಾರು ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇನೆ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರ ಪಾಕೆಟ್ ನಿಂದ ತೆಗೆದು ಕುಮಾರಸ್ವಾಮಿ ದುಡ್ಡು ಕೊಟ್ಟಿದ್ದರೇ? ನಾವು ಅವರನ್ನು ಸಿಎಂ ಮಾಡಿ ನಾವು ಹಣ ಬಿಡುಗಡೆ ಮಾಡಿದ್ದು. ಅದು ರಾಜ್ಯದ ಜನರ ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ನೀಡಿದ್ದು ಎಂದು ತಿರುಗೇಟು ಕೊಟ್ಟಿದ್ದಾರೆ.
ಕಳೆದ ಮೂರು ವರ್ಷಗಳಿಂದ ಬೆಳಗಾವಿಯಲ್ಲಿ ಬಜೆಟ್ ಅಧಿವೇಶನ ನಡೆಸಿಲ್ಲ ಆದರೆ ಕಾರ್ಯಕಾರಿಣಿ ಸಭೆ ನಡೆಸುತ್ತಿದೆ. ಹಾಗಾದರೆ 400 ಕೋಟಿ ರೂಪಾಯಿ ಖರ್ಚು ಮಾಡಿ ಸುವರ್ಣ ವಿಧಾನ ಸೌಧ ಕಟ್ಟಿ ಏನು ಪ್ರಯೋಜನ. ಸರ್ಕಾರ ಕೋವಿಡ್ ಕಾರಣ ನೀಡುತ್ತಿದೆ. ಹಾಗಾದರೆ ಬೆಂಗಳೂರು ಕೊರೋನಾ ಮುಕ್ತವಾಗಿದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಗೋ ಹತ್ಯೆ ನಿಷೇಧ ಮಸೂದೆ ಬಗ್ಗೆ ಕೇಳಿದಾಗ ರೈತರಿಗೆ ಚೆನ್ನಾಗಿ ಗೊತ್ತಿದೆ. ಆರ್ ಎಸ್ ಎಸ್ ನವರಿಗೆ ಜಾನುವಾರುಗಳ ಸಾಕಣೆ ಕಷ್ಟದ ಬಗ್ಗೆ ಗೊತ್ತಿಲ್ಲ, ತಮ್ಮ ರಾಜಕೀಯ ಲಾಭಕ್ಕಾಗಿ ಅವರು ಸಮಾಜವನ್ನು ಇಬ್ಭಾಗ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

SCROLL FOR NEXT