ರಾಜಕೀಯ

ಮನೆ ಕೊಟ್ಟಿಲ್ಲದ ಕಾರಣ ಕಾವೇರಿ ಗೃಹದಲ್ಲಿದ್ದೇನೆ: ಮಾಜಿ ಸಿಎಂ ಸಿದ್ದರಾಮಯ್ಯ

Manjula VN

ಬೆಂಗಳೂರು: ನನಗೆ ಹಂಚಿಕೆಯಾಗಿರುವ ಸರ್ಕಾರಿ ಅಧಿಕೃತ ನಿವಾಸವನ್ನು ಲೋಕೋಪಯೋಗಿ ಇಲಾಖೆಯು ದುರಸ್ತಿ ಕಾಮಗಾರಿ ಕಾರಣದಿಂದಾಗಿ ನನಗಿನ್ನೂ ಹಸ್ತಾಂತರ ಮಾಡಿಲ್ಲ. ಹೀಗಾಗಿ ಅನಿವಾರ್ಯ ಪರಿಸ್ಥಿತಿಯಲ್ಲಿ ಕಾವೇರಿ ನಿವಾಸದಲ್ಲಿಯೇ ಉಳಿದುಕೊಂಡಿದ್ದೇನೆ. ಆದರೆ, ಸತ್ಯ ಅರಿಯದ ಬಿಜೆಪಿಯವರು ಸುಳ್ಳು ಸೃಷ್ಟಿಸಿ ವಿಕೃತಾನಂದ ಅನುಭವಿಸುತ್ತಿದ್ದಾರೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ. 

ಶಿಷ್ಠಾಚಾರದ ಪ್ರಕಾರ ಕಾವೇರಿ ನಿವಾಸ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹಂಚಿಕೆಯಾಗಬೇಕು. ಸತತವಾಗಿ ಸೂಚನೆ ನೀಡುತ್ತಿದ್ದರೂ ಮಜಾವಾದಿ ಸಿದ್ದರಾಮಯ್ಯ ಖಾಲಿ ಮಾಡುತ್ತಿಲ್ಲ ಎಂದು ಬಿಜೆಪಿ ಟ್ವೀಟ್ ಮಾಡಿತ್ತು. 

ಇದಕ್ಕೆ ಟ್ವಿಟರ್ ನಲ್ಲಿಯೇ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, ಮಾಜಿ ಸಚಿವ ರೇವಣ್ಣ ಅವರಿಗೆ ಹಂಚಿಕೆಯಾಗಿದ್ದ ಮನೆಯು ನನಗೆ ಹಂಚಿಕೆಯಾಗಿದೆ. ಆದರೆ, ರೇವಣ್ಣ ಅವರು ಡಿ.15 ರಂದು ಮನೆ ಖಾಲಿ ಮಾಡಿದ್ದಾರೆ. ಹೀಗಾಗಿ ಲೋಕೋಪಯೋಗಿ ಇಲಾಖೆಯು ಮನೆಯ ದುರಸ್ತಿಯನ್ನು ಜ.15ಕ ಒಳಗಾಗಿ ಪೂರ್ಣಗೊಳಿಸುವುದಾಗಿ ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದೆ. 

ಡಿ.15ರವರೆಗೆ ರೇವಣ್ಣ ಮನೆ ಬಿಟ್ಟುಕೊಡದಿದ್ದರಿಂದ ದುರಸ್ತಿ ವಿಳಂಬವಾಗಿದೆ. ಇದರಿಂದ ಅನಿವಾರ್ಯವಾಗಿ ಕಾವೇರಿ ನಿವಾಸದಲ್ಲಿಯೇ ಉಳಿಯಬೇಕಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಲೋಕೋಪಯೋಗಿ ಇಲಾಖೆಯೇ ಮಾಹಿತಿ ನೀಡಿದೆ. ಹೀಗಿದ್ದರೂ ರಾಜ್ಯ ಬಿಜೆಪಿಯವರು ಸುಳ್ಳು ಸುದ್ಧಿ ಸೃಷ್ಟಿಸುತ್ತಾ ವಿಕೃತಾನಂದ ಅನುಭವಿಸುತ್ತಿರುವುದು ವಿಷಾದನೀಯ ಎಂಡು ಟ್ವೀಟ್ ಮಾಡಿದ್ದಾರೆ. 

SCROLL FOR NEXT