ರಾಜಕೀಯ

ಸಚಿವ ಶ್ರೀರಾಮುಲುಗೆ ಧನ್ಯವಾದ ಹೇಳಿದ ಮಾಜಿ ಸಚಿವ ತನ್ವೀರ್ ಸೇಠ್

Lingaraj Badiger

ಬೆಂಗಳೂರು: ಮಾಜಿ ಸಚಿವ ತನ್ವೀರ್ ಸೇಠ್ ಅವರು ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ಪತ್ರ ಬರೆದು ಧನ್ಯವಾದ ಹೇಳಿದ್ದಾರೆ. ಎರಡು ತಿಂಗಳುಗಳ ಹಿಂದೆ ದುಷ್ಕರ್ಮಿಯ ಕೊಲೆ ಯತ್ನದಿಂದ ಜೀವನ್ಮರಣ ಹೋರಾಟ ನಡೆಸಿದ್ದ ತನ್ವೀರ್ ಸೇಠ್ ಇದೀಗ ಸುಧಾರಿಸಿಕೊಳ್ಳುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಪತ್ರ ಬರೆದಿದ್ದಾರೆ. 
ಆಸ್ಪತ್ರೆಗೆ ದಾಖಲಾಗಿದ್ದಾಗ ಸಚಿವ ಶ್ರೀರಾಮುಲು ಭೇಟಿಯಾಗಿ ಧೈರ್ಯ ತುಂಬಿದ್ದನ್ನು ಸೇಠ್ ಸ್ಮರಿಸಿಕೊಂಡಿದ್ದಾರೆ.
  
ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ತನ್ವೀರ್ ಸೇಠ್ ಬರೆದ ಪತ್ರ ಹೀಗಿದೆ, 'ಮಾನ್ಯ ಶ್ರೀರಾಮುಲು ಅವರೇ, ಸಾವಿರಾರು ಜನರ ಪ್ರೀತಿ, ಪ್ರಾರ್ಥನೆಗಳಿಂದ ನನಗೆ ಪುನರ್ಜನ್ಮ ಸಿಕ್ಕಿದೆ. ತಾವು ನನ್ನ ಆರೋಗ್ಯ ವಿಚಾರಿಸಲು ಆಸ್ಪತ್ರಗೆ ಬಂದಿದ್ದು, ದೂರವಾಣಿ ಕರೆ ಮಾಡಿ ನನ್ನಲ್ಲಿ ಹಾಗೂ ನನ್ನ ಕುಟುಂಬದವರಲ್ಲಿ ಆತ್ಮಸ್ಥೈರ್ಯ ತುಂಬಿದ್ದಕ್ಕೆ ನಾನು ವೈಯಕ್ತಿಕವಾಗಿ ಹಾಗೂ ನನ್ನ ಕುಟುಂಬದವರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ವೈದ್ಯರ ಸಲಹೆಯಂತೆ ಇನ್ನೂ 5 ರಿಂದ 6 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಬೇಕಾಗಿದೆ.  ತಮ್ಮ ವಿಶ್ವಾಸ ಹಾಗೂ ಆಶೀರ್ವಾದ ಸದಾ ನನ್ನ ಮತ್ತು ನನ್ನ ಕುಟುಂಬವದರ ಮೇಲಿರಲೆಂದು ಕೋರುತ್ತೇವೆ' ಎಂದು ಪತ್ರ ಬರೆದು ಧನ್ಯವಾದ ಹೇಳಿದ್ದಾರೆ.
  
ಮೈಸೂರಿನಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದಾಗ ನವೆಂಬರ್ 17 ರಂದು ದುಷ್ಕರ್ಮಿಯೊಬ್ಬನಿಂದ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆಯಾಗಿತ್ತು. ಬಳಿಕ ವಿದೇಶದಲ್ಲಿ ಸೇಠ್ ವಿಶ್ರಾಂತಿ ಪಡೆಯುತ್ತಿದ್ದರು. ಇತ್ತೀಚಿಗಷ್ಟೆ ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ವಿದೇಶದಿಂದ ಮೈಸೂರಿಗೆ ಸೇಠ್ ಆಗಮಿಸಿದ್ದಾರೆ.
  
ಈ ಹಿಂದೆ ಸಿದ್ದರಾಮಯ್ಯ ಅವರು ಚಿಕಿತ್ಸೆ ಪಡೆಯಲು ಆಸ್ಪತ್ರೆಯಲ್ಲಿದ್ದಾಗ ಬಿಜೆಪಿ ಸೇರಿದಂತೆ ಪಕ್ಷಬೇಧವಿಲ್ಲದೆ ಎಲ್ಲ ಪಕ್ಷಗಳ ನಾಯಕರು ಭೇಟಿಯಾಗಿದ್ದರು. ರಾಜ್ಯದ ರಾಜಕಾರಣಗಳು ಈ ಅನುಕರಣೀಯ ನಡೆ ಜನರ ಶ್ಲಾಘನೆಗೆ ಒಳಗಾಗಿತ್ತು.

SCROLL FOR NEXT