ಮೈಸೂರು: ಸಂಪುಟ ವಿಸ್ತರಣೆ ಸಂಬಂಧ ಕೆಲ ದಿನಗಳ ಹಿಂದೆ ಸಾರ್ವಜನಿಕ ಸಮಾರಂಭದಲ್ಲಿ ಲಿಂಗಾಯತ ಸಮುದಾಯದ ವಚನಾನಂದ ಸ್ವಾಮೀಜಿ ಮುರುಗೇಶ ನಿರಾಣಿ ಪರ ಬ್ಯಾಟಿಂಗ್ ಮಾಡಿದ್ದರು.
ಈಗ, ಕುರುಬ ನಾಯಕರ ಸರದಿ, ಸೋತ ಅಭ್ಯರ್ಥಿಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಾರದೆಂಬ ಆದೇಶದಿಂದ ಆತಂಕಗೊಂಡಿರುವ ಕುರುಬ ಸಮುದಾಯದ ನಾಯಕರರು ಕಾಗಿನೆಲೆ ಮಠದ ಕದ ತಟ್ಟುತ್ತಿದ್ದಾರೆ.
ಕುರುಬ ಸಮುದಾಯದ ನಾಯಕರುಗಳಾದ ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್, ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಕಾಗಿನೆಲೆ ಶ್ರಿಗಳ ಮೂಲಕ ಒತ್ತಡ ಹಾಕಿಸುವ ತಂತ್ರಕ್ಕೆ ಮುಂದಾಗಿದ್ದಾರೆ.
ಈ ಸಂಬಂದ ಕಾಗಿನೆಲೆಯ ಶ್ರೀ ನಿರಂಜನಾನಂದ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವಿಷಯವಾಗಿ ತಾವು ಮುಖ್ಯಮಂತ್ರಿಗಳ ಬಳಿ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ.
ಇನ್ನು ತಾವು ಶ್ರೀಗಳ ಜೊತೆ ಮಾತನಾಡಿರುವುದಾಗಿ ವಿಶ್ವನಾಥ್ ಸ್ಪಷ್ಟ ಪಡಿಸಿದ್ದಾರೆ. ತಾವು ರಾಜಿನಾಮೆ ನೀಡುವ ಮುನ್ನ ಪಕ್ಷ ತಮಗೆ ನೀಡಿದ್ದ ಭರವಸೆಯನ್ನು ಪಕ್ಷ ಈಡೇರಿಸುತ್ತದೆ ಎಂದು ತಿಳಿಸಿದ್ದಾರೆ.
ಸೋತ ಶಾಸಕರಿಗೆ ಸಚಿವ ಸ್ಥಾನ ನೀಡುವುದು ಕಷ್ಟ ಎಂದು ಎಸ್.ಟಿ ಸೋಮಶೇಖರ್, ಸುಧಾಕರ್ ಹೇಳಿದ್ದಾರೆ, ಆದರೆ ಸೋತ ಶಾಸಕರಿಗೂ ಮಂತ್ರಿ ಸ್ಥಾನ ನೀಡಬೇಕೆಂದು ರಮೇಶ್ ಜಾರಕಿಹೊಳಿ ಮತ್ತು ನಾರಾಯಣಗೌಡ ಒತ್ತಾಯಿಸಿದ್ದಾರೆ.