ರಾಜಕೀಯ

ಜೂನ್ 14ರ ಬದಲಾಗಿ ಮತ್ತೊಂದು ದಿನ ಡಿಕೆಶಿ ಪದಗ್ರಹಣ

Lingaraj Badiger

ಬೆಂಗಳೂರು:  ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಕೊನೆಗೂ ಅನುಮತಿ ನೀಡಿದ್ದು, ಡಿಕೆಶಿ ಸಂತಸ ವ್ಯಕ್ತಪಡಿಸಿದ್ದಾರೆ ಮತ್ತು ಅನುಮತಿ ನೀಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಧನ್ಯವಾದ ಹೇಳಿದ್ದಾರೆ. ಆದರೆ ಪದಗ್ರಹಣ ಕಾರ್ಯಕ್ರಮಕ್ಕೆ ಜೂನ್ 14ರ ಬದಲಾಗಿ ಮತ್ತೊಂದು ದಿನಾಂಕ ನಿಗದಿಪಡಿಸುವುದಾಗಿ ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವುದಾಗಿ ಮುಖ್ಯಮಂತ್ರಿಗಳು ಹೇಳಿರುವ ಬಗ್ಗೆ ಮಾಧ್ಯಮಗಳಿಂದಲೇ ತಮಗೆ ಮಾಹಿತಿ ತಿಳಿದಿದೆ. ಬುಧವಾರ ಮುಖ್ಯಮಂತ್ರಿಗಳು ತಮಗೆ ಕರೆ ಮಾಡಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷಗಳು ಇರಬೇಕು ಎಂದರು.

ಜೂನ್ 14 ರಂದು ಪದಗ್ರಹಣ ಕಾರ್ಯಕ್ರಮ ಮಾಡದೇ ಪಕ್ಷದ ಮುಖಂಡರ ಜೊತೆ ಚರ್ಚಿಸಿ ಮತ್ತೊಂದು ದಿನಾಂಕ ನಿಗದಿಪಡಿಸಲಾಗುವುದು. ಮಾರ್ಗಸೂಚಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ನಡೆಸಬೇಕು. ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ದೆಹಲಿಯ ಪಕ್ಷದ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿ ಸದ್ಯದಲ್ಲಿಯೇ ದಿನ ಗೊತ್ತುಪಡಿಸಲಾಗುವುದು ಎಂದರು.

ಮೇಲ್ಮನೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಚರ್ಚಿಸಿ ದಿನಾಂಕ ನಿಗದಿಪಡಿಸಬೇಕು ಎಂದು ಮುಖ್ಯಮಂತ್ರಿಗಳೇ ಹೇಳಿದ ನಂತರ ಇನ್ನೇನು ಬೇಕು. ಸತ್ಯ ಪರೀಕ್ಷೆಗೆ ಕೇಳಲು ಆಗುವುದಿಲ್ಲ. ಮುಖ್ಯಮಂತ್ರಿಗಳು ಮಾತುಕೊಟ್ಟ ನಂತರ ಎಲ್ಲವು ಮುಗಿಯಿತು ಎಂದು ಮಾರ್ಮಿಕವಾಗಿ ನುಡಿದರು.

SCROLL FOR NEXT