ರಾಜಕೀಯ

ಮಹಾತ್ಮ ಗಾಂಧಿ ಕೊಂದ ಗೋಡ್ಸೆಯನ್ನು ದೇಶದ್ರೋಹಿ ಎಂದು ಕರೆಯಲು ಧೈರ್ಯವಿದೆಯೇ?

Shilpa D

ಬೆಂಗಳೂರು: ತಮ್ಮನ್ನು ದೇಶದ್ರೋಹಿ ಎನ್ನುವ ನೀವು ಮಹಾತ್ಮಾಗಾಂಧಿಯವರನ್ನು ಕೊಂದ ನಾಥೂರಾಮ್ ಗೋಡ್ಸೆಯನ್ನು ದೇಶದ್ರೋಹಿ ಎಂದು ಕರೆಯುವ ಧೈರ್ಯ ತೋರಿಸಿ ಎಂದು ಕಾಂಗ್ರೆಸ್ ಸದಸ್ಯ ಯು.ಟಿ.ಖಾದರ್ ವಿಧಾನಸಭೆಯಲ್ಲಿಂದು ಬಿಜೆಪಿ ಸದಸ್ಯರಿಗೆ ಸವಾಲು ಹಾಕಿದ ಪ್ರಸಂಗ ನಡೆಯಿತು.

ಸಂವಿಧಾನ ಕುರಿತ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಖಾದರ್, ಸಂವಿಧಾನ ವಿರೋಧಿ ಆಡಳಿತವೇ ಇಂದಿನ‌ ಎಲ್ಲಾ ಸಮಸ್ಯೆಗಳಿಗೆ ಕಾರಣ. ಸಂವಿಧಾನದ ಆಶಯದಂತೆ ಆಡಳಿತ ನಡೆಸಿದರೆ ದೇಶ ಶಾಂತಿಯಿಂದ ಇರುತ್ತದೆ. ವಾಕ್‌ ಸ್ವಾತಂತ್ರ್ಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಇವತ್ತು ಯಾರಾದರೂ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ವಿರುದ್ಧ ಮಾತಾಡಿದರೆ ದೇಶದ್ರೋಹದ ಪ್ರಕರಣ ದಾಖಲಿಸಲಾಗುತ್ತಿದೆ. ಬೀದರ್‌ನ ಶಾಹೀನ್ ಪ್ರಕರಣ ಇದಕ್ಕೆ ಸಾಕ್ಷಿ, ನಾಟಕ ಮಾಡಿದ ಕಾರಣಕ್ಕೆ ಶಾಹಿನ್ ಶಾಲೆಯಲ್ಲಿ ಶಿಕ್ಷಕಿ, ಮಗುವಿನ ತಾಯಿ‌ ಮೇಲೆ ದೇಶದ್ರೋಹದ ಪ್ರಕರಣ ಹಾಕಲಾಗಿದೆ. ಸಮಾಜಕ್ಕೆ ಮಾರಕ ಭಾಷಣ ಮಾಡುವವರಿಗೆ ರಾಜ್ಯದಲ್ಲಿ ಅವಕಾಶ ಕೊಡಬೇಡಿ, ಉವೈಸಿ ಹಾಗೂ ಪ್ರಜ್ಞಾ ಸಿಂಗ್ ಅಂತಹವರಿಗೆ ಭಾಷಣ ಮಾಡಲು ಅವಕಾಶ ನೀಡಬೇಡಿ ಎಂದು ಒತ್ತಾಯಿಸಿದರು.

ನಾವು ಹದಿನೈದು ಕೋಟಿ ಇದ್ದೇವೆ ಎಂದು ಹೇಳಿಕೊಂಡು ವಿಭಜನೆಯ ಮಾತುಗಳನ್ನು ಆಡಿದ ಸಂಸದ ನಳೀನ್ ಕುಮಾರ್ ಕಟೀಲ್ ರನ್ನು ಏಕೆ ಬಂಧಿಸಲಿಲ್ಲ ಎಂದು ಪ್ರಶ್ನಿಸಿದ ಯು.ಟಿ.ಖಾದರ್, ತಮ್ಮನ್ನು ದೇಶದ್ರೋಹಿ ಎನ್ನುವ ನೀವು ಮಹಾತ್ಮಾಗಾಂಧಿಯವರನ್ನು ಕೊಂದ ನಾಥೂರಾಮ್ ಗೋಡ್ಸೆಯನ್ನು ದೇಶದ್ರೋಹಿ ಎಂದು ಕರೆಯುವ ಧೈರ್ಯ ತೋರಿಸಿ ಎಂದು ಹೇಳಿದರು.

SCROLL FOR NEXT