ರಾಜಕೀಯ

ಅತೃಪ್ತ ಶಾಸಕರಿಂದ ಮತ್ತೊಂದು ಅನಾಮಧೇಯ ಪತ್ರ: ಯಡಿಯೂರಪ್ಪ ಹೆಸರಿನಲ್ಲಿ ವಿಜಯೇಂದ್ರ ದರ್ಬಾರ್!

Srinivasamurthy VN

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ಅತೃಪ್ತ ಶಾಸಕರು ಮತ್ತೊಂದು ಅನಾಮಧೇಯ ಪತ್ರ ಬಿಡುಗಡೆ ಮಾಡಿದ್ದಾರೆ. 

“ಸೂಪರ್ ಸಿ.ಎಂ.ಬಿ.ವೈ. ವಿಜಯೇಂದ್ರ ದರ್ಬಾರ್“ ಹೆಸರಿನಲ್ಲಿ ಪತ್ರ ಬಿಡುಗಡೆಯಾಗಿದ್ದು, ಯಡಿಯೂರಪ್ಪ ಮತ್ತವರ ಕುಟುಂಬದ ಅಧಿಕಾರದ ಲಾಲಸೆ ಬಗ್ಗೆ ಪತ್ರದಲ್ಲಿ ಬೆಳಕು ಚೆಲ್ಲಲಾಗಿದೆ.  78 ವರ್ಷದ ಬಿ.ಎಸ್. ಯಡಿಯೂರಪ್ಪ ಸಂವಿಧಾನಿಕವಾಗಿ ಮತ್ತು ತಾಂತ್ರಿಕವಾಗಿ ಮಾತ್ರ ಮುಖ್ಯಮಂತ್ರಿ ಹುದ್ದೆಯಲ್ಲಿದ್ದು, ಅವರ ಕುಟುಂಬ ಸದಸ್ಯರು ಸರ್ಕಾರಕ್ಕೆ ಸಮಾನಾಂತರವಾಗಿ ಪರ್ಯಾಯ ಕೂಟ ರಚಿಸಿಕೊಂಡು ಅಧಿಕಾರ ನಡೆಸುತ್ತಿದ್ದಾರೆ ಎಂದು ಅತೃಪ್ತ ಶಾಸಕರು ಪತ್ರದಲ್ಲಿ ಆಪಾದಿಸಿದ್ದಾರೆ. 

ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಹಾಗೂ ವಂಶ ಪಾರಂಪರಿಕ ಆಡಳಿತ ಮೇಳೈಸುತ್ತಿದ್ದು, ಅನುವಂಶೀಯ ಆಡಳಿತಕ್ಕೆ ಸ್ವತಃ ಯಡಿಯೂರಪ್ಪ ಒತ್ತಾಸೆಯಾಗಿದ್ದಾರೆ. ಮಗನ ಕಾರ್ಯವೈಖರಿಯ ಬಗ್ಗೆ ತಂದೆ ಮೆಚ್ಚುಗೆ ವ್ಯಕ್ತಪಡಿಸಿರುವುದು ದುರಾದೃಷ್ಟಕರ ಸಂಗತಿ. ದೇವೇಗೌಡರ ಪುತ್ರ ವ್ಯಾಮೋಹವನ್ನು ಟೀಕಿಸುತ್ತಿದ್ದ ಯಡಿಯೂರಪ್ಪ ತಮ್ಮ ಅಧಿಕಾರವನ್ನು ಕುಟುಂಬಕ್ಕೆ ದಯಪಾಲಿಸಿ ದೃತೃರಾಷ್ಟ್ರ ಪ್ರೇಮ ತೋರಿಸುತ್ತಿದ್ದಾರೆ ಎಂದು ದೂರಿದ್ದಾರೆ. 

ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಕೇವಲ ಉತ್ಸವ ಮೂರ್ತಿಯಾಗಿದ್ದು, ವಿಜಯೇಂದ್ರ ತನ್ನದೇ ಆದ ಕೂಟ ರಚಿಸಿ ಸೂಪರ್ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಧ್ಯವರ್ತಿಗಳು ಹಾಗೂ ಹಣ ಕೊಟ್ಟು ಕೆಲಸ ಮಾಡಿಕೊಳ್ಳಲು ಇಚ್ಚಿಸುವರು ಈ ಕೂಟವನ್ನು ಸಂಪರ್ಕಿಸಿ ಕಮಿಷನ್ ಆಧಾರದ ಮೇಲೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು ಮುಖ್ಯಮಂತ್ರಿಗಳ ಆದೇಶ ಇದ್ದರೂ ಕೆಲಸ ಆಗದೆ ಪರಿತಪಿಸುತ್ತಿದ್ದಾರೆ. ವಿಜಯೇಂದ್ರ ಅವರ ಒಪ್ಪಿಗೆ ಹಾಗೂ ಆದೇಶ ಇಲ್ಲದೆ ಸರಕಾರದಲ್ಲಿ ಏನೂ ನಡೆಯುವುದಿಲ್ಲ ಎಂದಿದ್ದಾರೆ.

ಸರಕಾರವನ್ನು ಪ್ರೈ ಲಿ ಕಂಪನಿಯಂತೆ ಕಾರ್ಪೋರೇಟ್ ಶೈಲಿಯಲ್ಲಿ ನಡೆಸಲಾಗುತ್ತಿದೆ. ಬಿಜೆಪಿ ಶಾಸಕರುಗಳ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಆಗುತ್ತಿಲ್ಲ. ವಿರೋಧ ಪಕ್ಷಗಳ ಮುಖಂಡರುಗಳ ಕ್ಷೇತ್ರಗಳಿಗೆ ನೂರಾರು ಕೋಟಿ ರೂ ಅನುದಾನ ಬಿಡುಗಡೆ ಮಾಡಿ ತಾರತಮ್ಯ ಮಾಡಲಾಗುತ್ತಿದೆ ಎಂದು ಈ ಅತೃಪ್ತ ಶಾಸಕರು ದೂರಿದ್ದಾರೆ. 

ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಕಾರ್ಯಗಳು ಆಗುತ್ತಿಲ್ಲ. ಆಡಳಿತದಲ್ಲಿರುವ ಭ್ರಷ್ಟಾಚಾರ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ. ಇದನ್ನು ಸರಿಪಡಿಸಿಕೊಳ್ಳದಿದ್ದರೆ ಶಾಸಕರಾಗಿ ನಮ್ಮ ಸಾರ್ವಜನಿಕ ಬದುಕು ಕೂಡಾ ಅತಂತ್ರವಾಗಲಿದೆ ಎಂದು ಈ ಶಾಸಕರು ಪತ್ರದಲ್ಲಿ ಅಲವತ್ತುಕೊಂಡಿದ್ದಾರೆ. ವಿರೋಧ ಪಕ್ಷಗಳು ಆಸೆ ಆಮಿಷಕ್ಕೆ ಬಲಿಯಾಗಿ ಯಡಿಯೂರಪ್ಪ ಅವರ ಕೈಗೊಂಬೆಗಳಾಗಿವೆ. ಆಡಳಿತ ಪಕ್ಷದ ಜೊತೆ ಪ್ರತಿಪಕ್ಷಗಳು ವ್ಯವಹಾರಿಕ ಹೊಂದಾಣಿಕೆ ಮಾಡಿಕೊಂಡಿವೆ. ಶಾಸಕರುಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ ಎಂದು ಹೈಕಮಾಂಡ್ಗೆ ಈ ಶಾಸಕರು ಮನವಿ ಮಾಡಿದ್ದಾರೆ.

SCROLL FOR NEXT